ಕಾಯಕದ ಮೂಲಕ ಸಮಾಜಕ್ಕೆ ಬೆಳಕು ನೀಡಿದ ನುಲಿಯ ಚಂದಯ್ಯ: ಜಗದೀಶ್ ಭಜಂತ್ರಿ

| Published : Aug 21 2024, 12:36 AM IST

ಕಾಯಕದ ಮೂಲಕ ಸಮಾಜಕ್ಕೆ ಬೆಳಕು ನೀಡಿದ ನುಲಿಯ ಚಂದಯ್ಯ: ಜಗದೀಶ್ ಭಜಂತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಹಲವಾರು ಶಿವಶರಣರು ಶ್ರಮಿಸಿದ್ದಾರೆ.

ನುಲಿಯ ಚಂದಯ್ಯ ಜಯಂತಿ ಆಚರಣೆ ಕಾರ್ಯಕ್ರಮ: ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾಯಕ, ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಶರಣ ನುಲಿಯ ಚಂದಯ್ಯನವರು ಎಂದು ಕಾರಟಗಿಯ ಶಿಕ್ಷಕ ಜಗದೀಶ್ ಭಜಂತ್ರಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾದ ಶ್ರೀ ನುಲಿಯ ಚಂದಯ್ಯ ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಹಲವಾರು ಶಿವಶರಣರು ಶ್ರಮಿಸಿದ್ದಾರೆ. ಇದೊಂದು ಸುವರ್ಣಯುಗವಾಗಿದ್ದು, ಜಗಜೋತಿ ಬಸವೇಶ್ವರರು ಹಾಗೂ ಅನೇಕ ಮಹನೀಯರು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಹೋರಾಡಿದ್ದಾರೆ. ಅನುಭವ ಮಂಟಪದಲ್ಲಿ ಶ್ರೇಷ್ಠ ಶರಣರಲ್ಲಿ ಒಬ್ಬರೂ ಶ್ರೀ ನುಲಿಯ ಚಂದಯ್ಯನವರು. ನೂಲು ತಯಾರಿಸುವ ಕಾಯಕದ ಮೂಲಕ ದಾಸೋಹ ಮಾಡಿಕೊಂಡು ಬಂದಂತಹ ಶ್ರೇಷ್ಠ ದಾಸೋಹಿಗಳಾಗಿದ್ದರು ಎಂದರು.ಸಮಾಜದ ಮುಖಂಡ ಲಕ್ಷ್ಮಣ ಮಾಳಗಿ ಮಾತನಾಡಿ, ನುಲಿಯ ಚಂದಯ್ಯನವರು ತಮ್ಮ ವಚನಗಳ ಮೂಲಕ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ. ಇಂತಹ ಶರಣರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಕೊರಮ ಸಮಾಜದವರು ಉದ್ಯೋಗಕ್ಕಾಗಿ ಊರೂರಿಗೆ ಹೋಗುತ್ತಾರೆ. ಆದ್ದರಿಂದ ನಮ್ಮ ಸಮಾಜವು ಪರಿಶಿಷ್ಟ ಜಾತಿಯ ಅಲೆಮಾರಿ ಜನಾಂಗಕ್ಕೆ ಒಳಪಡುತ್ತದೆ. ನಮ್ಮ ಸಮುದಾಯವರಿಗೆ ಸರ್ಕಾರದ ವಿವಿಧ ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ವಿಶೇಷವಾಗಿ ಹಾಸ್ಟೆಲ್‌ಗಳ ಪ್ರವೇಶಕ್ಕೂ ಸ್ಥಾನಗಳ ಮೀಸಲಾತಿಯಿದ್ದು, ಇದರ ಸದುಪಯೋಗದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಕಂಬಣ್ಣ ಭಜಂತ್ರಿ, ಬಸವರಾಜ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ನಾಗರಾಜ ಭಜಂತ್ರಿ, ಭೀಮಣ್ಣ ಭಜಂತ್ರಿ, ಪರಶುರಾಮ ಭಜಂತ್ರಿ, ತಿಪ್ಪಣ್ಣ ಭಜಂತ್ರಿ, ಶಿವಕುಮಾರ ಗೊಂಡಬಾಳ, ವಿಜಯಕುಮಾರ ಹಾಲಳ್ಳಿ, ಯಮನೂರಪ್ಪ ಭಜಂತ್ರಿ, ಭೀಮಣ್ಣ ಕಾಮನೂರ, ತಿಪ್ಪಣ್ಣ, ಯಮನೂರಪ್ಪ ಕೊಪ್ಪಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಉಪನ್ಯಾಸ ನೀಡಿದ ಕಾರಟಗಿಯ ಶಿಕ್ಷಕರಾದ ಜಗದೀಶ್ ಭಜಂತ್ರಿ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪೊಲೀಸ್ ಇಲಾಖೆಯ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ:

ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಬೆಳಗ್ಗೆ ನಗರದ ಶ್ರೀಗವಿಸಿದ್ದೇಶ್ವರ ಮಠದ ಆವರಣದಿಂದ ಸಾಹಿತ್ಯ ಭವನದವರೆಗೆ ನಡೆದ ಮೆರವಣಿಗೆಗೆ ಗವಿಸಿದ್ದೇಶ್ವರ ಶ್ರೀಗಳು ಹಾಗೂ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಚಾಲನೆ ನೀಡಿದರು.