ಹೂವಿನಹಡಗಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ಜತೆಗೆ ವಿದ್ಯಾರ್ಥಿ ದೆಸೆಯಲ್ಲಿ ನಿರಂತರ ಅಧ್ಯಯನ ಮಾಡಿ, ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಹೇಳಿದರು.

ಪಟ್ಟಣದ ಶ್ರೀಮತಿ ರುದ್ರಾಂಬಾಬ ಎಂ.ಪಿ. ಪ್ರಕಾಶ್ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ತರುಣ ಸಂಘದಿಂದ ಆಯೋಜಿಸಿದ್ದ 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಎಲ್ಲ ಪ್ರೌಢ ಶಾಲೆಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾ ಮನೋಭಾವನೆ ಎಲ್ಲ ಕಡೆಗೂ ಇದೆ. ಉದ್ಯೋಗ ಪಡೆಯುವಲ್ಲಿ ಸಹ ಹೆಚ್ಚಿನ ಸಂಖ್ಯೆಯ ಪೈಪೋಟಿ ಉಂಟಾಗುತ್ತಿದೆ. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಬೆನ್ನು ಬೀಳದೇ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಪ್ರತಿ ವರ್ಷವೂ ಪಟ್ಟಣದ ತರುಣ ಸಂಘದವರು ಶೈಕ್ಷಣಿಕ ಸಾಧಕರಿಗೆ ಹಣದ ರೂಪದಲ್ಲಿ ಸಹಾಯದ ಜೊತೆಗೆ ಗೌರವಿಸುವುದು, ಅತ್ಯಂತ ಶ್ಲಾಘನೀಯ ಕೆಲಸ. ವ್ಯಕ್ತಿತ್ವ ವಿಕಸನ, ನೈತಿಕ ಮೌಲ್ಯಗಳು, ಶಿಕ್ಷಣದ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ ಮಾತನಾಡಿ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆಯ ಕನಸು ಕಾಡಬೇಕು. ಐಎಎಸ್, ಐಪಿಎಸ್, ಕೆಎಎಸ್, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಮೂಲಕ ಉನ್ನತ ಸಾಧನೆ ಮಾಡಬೇಕು. ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ವಿವಿಧ ಸಂಘ ಸಂಸ್ಥೆಗಳು ಮಾಡುತ್ತಿವೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಚ್ಚು ಮಹತ್ವ ನೀಡಬೇಕು. ವೈದ್ಯರು, ಎಂಜಿನಿಯರ್‌ ಆಗುವ ಕೆಲಸ ಬಿಟ್ಟು, ಉಳಿದಂತೆ ಸಾಕಷ್ಟು ಹುದ್ದೆಗಳಿವೆ. ಅವುಗಳ ಕಡೆಗೆ ಹೆಚ್ಚು ಗಮನ ಹರಿಸಿ ಉತ್ತಮ ಅಭ್ಯಾಸ ಮಾಡುವ ಅಗತ್ಯವಿದೆ ಎಂದರು.


ತಾಪಂ ಇಒ ಜಿ.ಪರಮೇಶ್ವರ ಮಾತನಾಡಿ, ತಂದೆ, ತಾಯಿ ಕಷ್ಟಪಟ್ಟು ತಮ್ಮನ್ನು ಉನ್ನತ ಶಿಕ್ಷಣಕ್ಕೆ ಕಳಿಸುತ್ತಾರೆ. ಅವರ ಕನಸು ನನಸು ಮಾಡಬೇಕು. ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಂ.ಪಿ. ಸುಮಾ ವಿಜಯ್ ಮಾತನಾಡಿ, ಹಿರಿಯರ ಹಾದಿಯಲ್ಲಿ ನಾವು ಸಂಘವನ್ನು ರಚನಾತ್ಮಕವಾಗಿ ಮುನ್ನಡೆಸುವ ಸಂಕಲ್ಪ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ್ ಹಳ್ಳಿಗುಡಿ ಸಿಡಿಎಂಸಿ ಸದಸ್ಯ ಎಚ್.ಡಿ.ಜಗ್ಗಿನ್ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 50 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ₹4000, ಪಿಯುಸಿ 12 ಸಾಧಕರಿಗೆ ತಲಾ ₹5000 ಚೆಕ್ ವಿತರಿಸಿ ಗೌರವ ಸನ್ಮಾನ ನೆರವೇರಿಸಲಾಯಿತು. ಪ್ರಾಚಾರ್ಯ ಎಂ.ವಿಜಯಕುಮಾರ್ ಹೇಮಪ್ಪ, ಗ್ಲೋಬಲ್ ಕಾಲೇಜು ಪ್ರಾಂಶುಪಾಲ ಥಾಮಸ್ ಸಂತೋಷ್, ಮುಖ್ಯ ಗುರು ಸುರೇಶ ಅಂಗಡಿ, ಲತಾ ಮುಂಡವಾಡ, ಪತ್ರಕರ್ತ ಕೆ. ಅಯ್ಯನಗೌಡ, ಸಿಡಿಎಂಸಿ ಸದಸ್ಯರಾದ ನಶ್ರೀನ್, ಎಂಟ್ಮನಿ ರಮೇಶ್ ಉಪಸ್ಥಿತರಿದ್ದರು.

ತರುಣ ಸಂಘದ ಅಧ್ಯಕ್ಷ ಅಟವಾಳಗಿ ಕೊಟ್ರೇಶ್, ಕಾರ್ಯದರ್ಶಿ ಸಿ.ಕೆ.ಎಂ. ಬಸಲಿಂಗಯ್ಯ ಸ್ವಾಮಿ, ಗುರುವಿನ ಪ್ರಕಾಶ್, ನಾಗವೇಣಿ ನಿರ್ವಹಿಸಿದರು. ತಾಲೂಕಿನ ಸರ್ಕಾರಿ ಅನುದಾನಿತ ಅನುದಾನ ರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಹಾಗೂ ದ್ವಿತೀಯ ಪಿಯುಸಿ ಸಾಧಕರು ಗೌರವ ಪುರಸ್ಕಾರಕ್ಕೆ ಭಾಜನರಾದರು.