ಸಾರಾಂಶ
ವಿದ್ಯಾರ್ಥಿಗಳಿಗೆ ನಾಯಕತ್ವ, ಉದ್ಯೋಗ ಸಂಬಂದ ಕೌಶಲ್ಯ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಲೇಜು ಶಿಕ್ಷಣದ ನಂತರ ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ಕೌಶಲ್ಯ ಬೆಳೆಸಿಕೊಂಡಲ್ಲಿ ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶ ಪಡೆಯಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ವೈ. ಆಲದಾರ್ತಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ನಾಯಕತ್ವ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ನಿಮ್ಮ ಭವಿಷ್ಯದ ದಾರಿಗೆ ದಾರಿದೀಪವಾಗಲಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮೂಡಲಗಿರಿಯಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಸತ್ಪಜೆಗಳಾಗಿ ರೂಪುಗೊಳ್ಳಲು ಶಿಕ್ಷಣ ಒಂದು ಅಡಿಪಾಯ, ಈ ನಿಟ್ಟಿನಲ್ಲಿ ಬಂದಂತಹ ಎಲ್ಲಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಸಿ.ಪ್ರಶಾಂತ್ ನಾಯಕತ್ವ ಮತ್ತು ಉದ್ಯೋಗ ಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಅಗತ್ಯವಾದ ಇತರ ಕೌಶಲ್ಯವನ್ನು ಈಗಿನಿಂದಲೇ ಅಳವಡಿಸಿ ಕೊಳ್ಳುವುದನ್ನು ರೂಢಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ್ ಸಹ ಪ್ರಾಧ್ಯಾಪಕರಾದ ಎಸ್.ಎಂ.ನಟೇಶ್ ಹಾಗೂ ಎ.ಆರ್.ಶಿವರಾಜು, ಡೇ ನಲ್ಮ್ ಅಭಿಯಾನ ವ್ಯವಸ್ಥಾಪಕ ಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದರ್ಶಿನಿ ಮತ್ತು ದಯಾನಂದ್ ಉಪಸ್ಥಿತರಿದ್ದರು. 13 ಕೆಸಿಕೆಎಂ 3