ಸಾರಾಂಶ
- ರಾಜ್ಯ ಮಟ್ಟದ ಮಾನಸಿಕ ಆರೋಗ್ಯ ತಜ್ಞರ 35ನೇ ಸಮ್ಮೇಳನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರ ಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯ ಬಲಪಡಿಸುವ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಮಾಜಿ ಆಧ್ಯಕ್ಷ ಡಾ. ಬಿ.ಎನ್.ಗಂಗಾಧರ್ ಹೇಳಿದರು.ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಭಾರತೀಯ ಮನೋವೈದ್ಯರ ಸಂಘ ಕರ್ನಾಟಕ ಶಾಖೆ, ಚಿಕ್ಕಮಗಳೂರು ಮನೋವೈದ್ಯರ ಸಂಘ ಮತ್ತು ಮಾನಸಿಕ ಆರೋಗ್ಯ ವಿಭಾಗ ಹಾಗೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ 35ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಮಾನಸಿಕ ಸ್ವಾಸ್ಥ್ಯ ಕಾಪಾಡುವ ಪ್ರಯತ್ನದ ಪ್ರಮುಖ ರೂವಾರಿಗಳು, ಅದರ ಚುಕ್ಕಾಣಿ ಹಿಡಿದ ಅನೇಕರು ಇಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯದ ಎನ್‌ಎಂಎಚ್‌ಬಿ ಜೊತೆಗೆ ಈಗ ಜಿಲ್ಲಾ ಮಟ್ಟದಲ್ಲಿ ಡಿಎಂಎಚ್‌ಬಿ ವ್ಯವಸ್ಥೆ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನದ ಟೆಲಿ ಮಾನಸ್ ಪ್ರಾರಂಭಿಸಲಾಗಿದೆ. ಅದಕ್ಕೂ ಕರ್ನಾಟಕವೇ ಚುಕ್ಕಾಣಿ ಹಿಡಿದಿದೆ. ಎಲ್ಲ ವೈದ್ಯಕೀಯ ತಜ್ಞರೂ ಸಹ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ರಾಷ್ಟ್ರಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯದ ಧ್ವಜವನ್ನು ಎತ್ತಿ ಹಿಡಿಯಲು ಕರ್ನಾಟಕದ ದೊಡ್ಡ ಪಾಲುದಾರಿಕೆ ಇದೆ. ಆ ಹೊಣೆ ಗಾರಿಕೆ ನಮಗೆ ಮುಂದಿನ ದಿನಗಳಲ್ಲಿ ಇರಬೇಕು. ಕಳೆದ 25-30 ವರ್ಷಗಳಲ್ಲಿ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ವೈಜ್ಞಾನಿಕವಾಗಿ ಮುಂದೆ ಹೋಗಿರುವ ಮನೋವೈದ್ಯಕೀಯ ಪ್ರಾಂತದ ಶಾಖೆ ಎಂದರೆ ಅದು ಕರ್ನಾಟಕ ಎಂದು ಹೇಳಿದರು.ಕರ್ನಾಟಕ ಶಾಖೆಗೆ ಈಗಾಗಲೇ ಭಾರತೀಯ ಮನೋ ವೈದ್ಯಕೀಯ ಸಂಘದ ಮುಖೇನ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಎಲ್ಲರೂ ಒಟ್ಟಿಗೆ ಸೇರಿ, ಹೊಣೆಗಾರಿಕೆ ಅರಿತುಕೊಂಡು ಕೆಲಸ ಮಾಡಿರುವುದು ಇದಕ್ಕೆ ಕಾರಣವಾಗಿರುವುದು ಹೆಮ್ಮೆಯ ವಿಷಯ ಎಂದರು.ಬೆಂಗಳೂರು ಎಸ್‌ಜೆಐಸಿ ನಿವೃತ್ತ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, 5 ಸಾವಿರ ವರ್ಷಗಳ ಹಿಂದೆಯೇ ಕೃಷ್ಣ ಪರಮಾತ್ಮ ಕೊಟ್ಟಂತಹ ಭಗವದ್ಗೀತೆಗಿಂತಲೂ ಅದ್ಭುತವಾದ ಮನೋತಜ್ಞ ಪುಸ್ತಕ ಮತ್ತೊಂದಿಲ್ಲ ಎಂದರು.ಭಗವದ್ಗೀತೆಗೂ ಮೊದಲು ಸ್ವತಃ ಶಿವ ತನ್ನ ಪತ್ನಿ ಪಾರ್ವತಿಗೆ ಸ್ಮೃತಿ ಹೋದಾಗ ಯೋಗ, ಧ್ಯಾನ, ಅಪಸ್ಮಾರವನ್ನು ಕಾಲಿನಲ್ಲಿ ನಿಯಂತ್ರಿಸಿ ನಟರಾಜನಾಗಿ ಅಜ್ಞಾನ, ಅಂಧಕಾರವನ್ನು ಹಿಮ್ಮೆಟ್ಟುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಶಿವನಿಗೆ ವೈದ್ಯನಾಥೇಶ್ವರ, ಜ್ಯೋತಿರ್ಲಿಂಗ, ಪರಂಜ್ಯೋತಿ ಎನ್ನುತ್ತೇವೆ. ಆ ಮೂಲಕ ವಿಶ್ವಕ್ಕೆ ಪ್ರಥಮ ಮನೋರೋಗ ತಜ್ಞ ಎನಿಸಿಕೊಂಡಿದ್ದಾನೆ ಎಂದು ಹೇಳಿದರು.ನಮ್ಮ ಸಮಾಜದಲ್ಲಿನ ಆತ್ಮಹತ್ಯೆ ಪ್ರವೃತ್ತಿ ಕಡಿಮೆ ಮಾಡುವ ಕಡೆಗೆ ಎಲ್ಲಾ ತಜ್ಞರು ಗಂಭೀರವಾಗಿ ಚಿಂತಿಸಬೇಕು. ಅದರಲ್ಲೂ ಯುವಕರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೋರೊಗ ತಜ್ಞರು ಬರವಣಿಗೆ ಮೂಲಕ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಒಂದು ಗಂಟೆ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುವುದರಿಂದ ಈ ಪ್ರವೃತ್ತಿ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.ದುರಂತ ಎಂದರೆ ನಿಮಾನ್ಸ್‌ನಲ್ಲಿ ತೆರೆಯಲಾಗಿರುವ ಮಹಿಳಾ ವ್ಯಸನ ಮುಕ್ತ ವಾರ್ಡ್ ನಲ್ಲಿ ಹಾಸಿಗೆಗಳು ಸಾಕಾಗದ ಸ್ಥಿತಿ ಇದೆ. ಇದು ದೇಶದ ಅತ್ಯಂತ ಕೆಟ್ಟ ಸಂಗತಿ. ಇಡೀ ಕುಟುಂಬವನ್ನು ಕಾಪಾಡಬೇಕಾದ ತಾಯಂದಿರೆ ಇಂತಹ ಹೀನ ಕೃತ್ಯಕ್ಕೆ ಹೋದರೆ ಬರೀ ಕುಟುಂಬವಲ್ಲ, ಇಡೀ ಸಮಾಜ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಇಡೀ ಸಂಘಟನೆ ಮಕ್ಕಳು, ಯುವಕರು ವ್ಯಸನಕ್ಕೆ ದಾಸರಾಗದಿರುವಂತೆ ತಡೆಯುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು. ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ಎಂ.ಆರ್.ಹರೀಶ್, ಕರ್ನಾಟಕ ಭಾರತಿಯ ಮನೋವೈದ್ಯ ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಬಿಜ್ಜಳ್, ಡಾ. ಹರೀಶ್ ದೇಲಂತಬೆಟ್ಟು, ಡಾ. ಅನಿಲ್ ಕುಮಾರ್ ನಾಗರಾಜ್, ಡಾ. ಟಿ.ಎಸ್. ಸತ್ಯನಾರಾಯಣರಾವ್, ಖಜಾಂಚಿ ಡಾ. ಚಂದ್ರಶೇಖರ್, ಸಹ ಕಾರ್ಯದರ್ಶಿ ಕೆ.ಎಸ್. ವಿನಯ್‌ಕುಮಾರ್, ರವೀಂದ್ರ ಮುನೋಳಿ, ಡಾ. ಪವಿತ್ರ, ಡಾ. ವೆಂಕಟೇಶ್, ಚಿಕ್ಕಮಗಳೂರು ಮನೋವೈದ್ಯರ ಸಂಘದ ಸಂಘಟನಾ ಅಧ್ಯಕ್ಷ ಡಾ. ವೆಂಕಟೇಶ್, ಡಾ. ಲೋಕೇಶ್ ಬಾಬು, ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. 13 ಕೆಸಿಕೆಎಂ 2ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಆರಂಭವಾದ ರಾಜ್ಯ ಮಟ್ಟದ ಮಾನಸಿಕ ಆರೋಗ್ಯ ತಜ್ಞರ ಸಮ್ಮೇಳನವನ್ನು ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಮಾಜಿ ಆಧ್ಯಕ್ಷ ಡಾ. ಬಿ.ಎನ್.ಗಂಗಾಧರ್ ಉದ್ಘಾಟಿಸಿದರು.