ತಿರುಪತಿ ಮಾದರಿಯಲ್ಲಿ ಮಾದೇಶ್ವರ ಬೆಟ್ಟ ಅಭಿವೃದ್ಧಿ: ಶಾಸಕ ಮಂಜುನಾಥ್‌

| Published : Dec 19 2024, 12:30 AM IST

ತಿರುಪತಿ ಮಾದರಿಯಲ್ಲಿ ಮಾದೇಶ್ವರ ಬೆಟ್ಟ ಅಭಿವೃದ್ಧಿ: ಶಾಸಕ ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ಮಾದರಿ ಶ್ರೀ ಕ್ಷೇತ್ರದಂತೆ ಹನೂರಿನ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಶಾಸಕ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಹನೂರು ತಿರುಪತಿ ಮಾದರಿ ಶ್ರೀ ಕ್ಷೇತ್ರದಂತೆ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಶಾಸಕ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ತಿರುಪತಿಯಲ್ಲಿ ವಿವಿಧ ಸ್ಥಳಗಳನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ವಿವಿಧಡೆ ಅಲ್ಲಿನ ಟಿಟಿಡಿ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನೆರೆಯ ರಾಜ್ಯ ಆಂಧ್ರಪ್ರದೇಶದ ತಿರುಪತಿ ದೇವಾಲಯಕ್ಕೆ ಶಾಸಕ ಎಂ.ಆರ್.ಮಂಜುನಾಥ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ. ರಘು ಹಾಗೂ ಎಇಇ ಮಹೇಶ್ ಕುಮಾರ್ ಭೇಟಿ ನೀಡಿ ತಿರುಪತಿ ದೇವಾಲಯದ ಟಿಟಿಡಿ ಧಾರ್ಮಿಕ ದತ್ತಿ ಇಲಾಖೆ ವ್ಯವಸ್ಥಾಪಕ ಕೋದಂಡರಾಮ ಅವರಿಂದ ತಿರುಪತಿಯಲ್ಲಿ ಬರುವ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಿರುವ ದಾಸೋಹ ವ್ಯವಸ್ಧೆ ಮತ್ತು ಅಡುಗೆಮನೆ ಸೇರಿದಂತೆ ಕ್ಯೂ ಕಾಂಪ್ಲೆಕ್ಸ್ ದೇವಾಲಯದ ಮುಂಭಾಗ ಇರುವ ಕಲ್ಯಾಣಿ ಸೇರಿದಂತೆ ಹಲವು ಮಾದರಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪ್ರದೇಶ:

ಶ್ರೀ ಕ್ಷೇತ್ರ ತಿರುಪತಿಯಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಅಲ್ಲಿನ ಟಿಟಿಡಿ ವ್ಯವಸ್ಥಾಪಕರು ಉತ್ತಮ ಮಾದರಿ ಅನುಸರಿಸುತ್ತಿದ್ದು, ನೀರನ್ನು ಗಾಜಿನ ಬಾಟಲಿಗಳಲ್ಲಿ ಸರಬರಾಜು ಮಾಡುವ ಮೂಲಕ ಪ್ಲಾಸ್ಟಿಕ್ ನಿಷೇಧಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ಅಲ್ಲಿನ ಟಿಟಿಡಿ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು. ಇದೇ ರೀತಿ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದ ತಾಳಬೆಟ್ಟದಲ್ಲಿ ಸಂಪೂರ್ಣ ವಾಹನಗಳನ್ನು ತಪಾಸಣೆಗೊಳಿಸಿ, ಮಲೆಮಹದೇಶ್ವರ ಬೆಟ್ಟಕ್ಕೆ ಬಿಡಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಇದೇ ವೇಳೆ ಚರ್ಚಿಸಲಾಯಿತು.

ರಸ್ತೆಗಳ ಅಭಿವೃದ್ಧಿಗೆ ಚರ್ಚೆ:

ತಿರುಪತಿ ಮಾದರಿಯಂತೆ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇದೆ ವೇಳೆ ಚರ್ಚಿಸಲಾಯಿತು. ಜೊತೆಗೆ ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ ಮಲೆಮಾದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಲು ಸಿಎಂ ಗಮನಕ್ಕೆ ತಂದು ಅಲ್ಲಿನ ರೂಪು ರೇಷೆಯ ಮಾದರಿಯಲ್ಲಿಯೇ ಮಲೆಮಾದೇಶ್ವರ ಬೆಟ್ಟ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಲೆಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಸಕಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ಸಿದ್ದಪಡಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮತ್ತು ಶಾಸಕ ಎಂ.ಆರ್‌. ಮಂಜುನಾಥ್‌ ಜೊತೆ ಯೋಜನೆ ತಯಾರಿಸಲು ಮುಂದಾಗಿದ್ದಾರೆ.

ಮಲೆಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಲ್ಲಿನ ಟಿಟಿಡಿ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಾಪಕರ ಜೊತೆ ಚರ್ಚಿಸಲಾಗಿದೆ. ಮಾದೇಶ್ವರ ಬೆಟ್ಟವನ್ನು ಅಭಿವೃದ್ಧಿಪಡಿಸಲು ಸಿಎಂ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಮಾದೇಶ್ವರ ಬೆಟ್ಟವನ್ನು ಉತ್ತಮ ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸಲು ಕ್ರಮಗೊಳ್ಳಲಾಗುವುದು.

ಎಂ.ಆರ್.ಮಂಜುನಾಥ್, ಶಾಸಕ, ಹನೂರು