ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರದ ಮೂರುಸಾವಿರಮಠದ ಸಭಾಭವನದಲ್ಲಿ ಆರ್ಟ್ ಆಫ್ ಲಿವಿಂಗ್‌ನಿಂದ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗದ ದರ್ಶನಕ್ಕೆ ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ಭಕ್ತರ ದಟ್ಟಣೆಯಿಂದ ಮಠದ ಪರಿಸರ ಭಕ್ತಿಭಾವದಿಂದ ಕಂಗೊಳಿಸಿತು.

ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಶ್ರೀಗಳು ಸೋಮನಾಥ ಜ್ಯೋತಿರ್ಲಿಂಗವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ವಿವಿಧ ಪೂಜಾ-ವಿಧಿ ವಿಧಾನಗಳನ್ನು ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಅವರು, ಸೋಮನಾಥ ಜ್ಯೋತಿರ್ಲಿಂಗವು ಮಹತ್ವಪೂರ್ಣ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದ್ದು, ಭಕ್ತರಿಗೆ ಅಪಾರ ಆತ್ಮಶಾಂತಿ ಹಾಗೂ ಭಕ್ತಿಭಾವವನ್ನು ಉಂಟುಮಾಡುತ್ತದೆ. ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿ ಸಂಕಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಇಂತಹ ಪವಿತ್ರ ಜ್ಯೋತಿರ್ಲಿಂಗಗಳ ದರ್ಶನವು ಭಕ್ತರ ಮನೋಬಲವನ್ನು ಹೆಚ್ಚಿಸಿ ಧಾರ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಸೋಮನಾಥ ಜ್ಯೋತಿರ್ಲಿಂಗ ಭಾರತದ ಅತ್ಯಂತ ಪುರಾತನ ಧಾರ್ಮಿಕ ಪರಂಪರೆಯ ಪ್ರತೀಕವಾಗಿದ್ದು, ಇತಿಹಾಸದಲ್ಲಿ ಅನೇಕ ಆಕ್ರಮಣಗಳನ್ನು ಎದುರಿಸಿದ್ದರೂ ಪುನಃ ಪುನಃ ನಿರ್ಮಾಣಗೊಂಡು ಸನಾತನ ಧರ್ಮದ ಶಾಶ್ವತತೆಯನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು.ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಮನೋಭಿಲಾಷೆಗಳ ಈಡೇರಿಕೆಗೆ ಪ್ರಾರ್ಥಿಸಿದರು. ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ಶರಣಾನಂದರ ಸಾನಿಧ್ಯದಲ್ಲಿ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ದರ್ಶನಕ್ಕಾಗಿ ಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹರ್ಷ ಮೆಟಗುಡ್ಡ, ಶಿವರಂಜನ್ ಬೋಳನ್ನವರ, ಗುರು ಮೆಟಗುಡ್ಡ, ಹರ್ಷವರ್ಧನ ಇಂಚಲ, ಸುನೀಲ ದೇಶನೂರ, ಗೌತಮ ಇಂಚಲ, ಶಂಕರ ಮಾಡಲಗಿ, ವಿಜಯ ಮೆಟಗುಡ್ಡ, ಜಯದೇವ ಸಂಗೊಳ್ಳಿ, ಸುನೀಲ ಮರಕುಂಬಿ, ಚಿನ್ಮಯ ಸುಕುಂದ, ಪ್ರಮೋದಕುಮಾರ ವಕ್ಕುಂದಮಠ, ಮಧು ಮೆಟಗುಡ್ಡ, ರತ್ನಾ ಬಿಳ್ಳೂರ, ಶುಕ್ಲಾ ಮೆಟಗುಡ್ಡ, ದಯಾನಂದ ಪರಾಳಶೆಟ್ಟರ, ಶರಣ ಹೂಲಿ, ಎಸ್‌ಎನ್‌ವಿವಿಎಸ್‌ ಸಂಸ್ಥೆಯ ನಿರ್ದೇಶಕರು, ಶಿಕ್ಷಕರು ಭಕ್ತರು ಉಪಸ್ಥಿತರಿದ್ದರು.