ಕನ್ನಡಪ್ರಭ ವಾರ್ತೆ ಬೆಳಗಾವಿ

ಬಸವಣ್ಣನವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾದ ದಾರಿದೀಪಗಳಾಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಮಹಾಂತೇಶ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿ ಮಾತನಾಡಿದರು. ಬಸವಣ್ಣನವರು ಕೇವಲ ಒಂದು ಧರ್ಮದ ಸ್ಥಾಪಕರಲ್ಲ, ಬದಲಾಗಿ ಕ್ರಾಂತಿಕಾರಿ ಚಿಂತಕರು. 12ನೇ ಶತಮಾನದಲ್ಲೇ ಸಮಾನತೆಗಾಗಿ ಹೋರಾಟ ನಡೆಸಿ ಜಗತ್ತಿಗೆ ಬೆಳಕಾದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಬಸವಣ್ಣನವರು ಮೌಢ್ಯಗಳ ವಿರುದ್ಧ ಹೋರಾಡಿದ ಮಹನೀಯರು. ನಾವು ಕೂಡ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜಾತಿ-ಧರ್ಮದ ಭೇದ ಮರೆತು ಮನುಷ್ಯ ಧರ್ಮವನ್ನು ಎತ್ತಿಹಿಡಿಯುವುದೇ ನಿಜವಾದ ಬಸವ ಜಯಂತಿ ಆಚರಣೆಯ ಉದ್ದೇಶ ಎಂದರು.

ಶರಣರ ಕಲ್ಯಾಣ ಕ್ರಾಂತಿಯ ಹಾದಿಯನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕಾಗಿದೆ. ಬಸವಣ್ಣನವರ ವಚನಗಳು ಬದುಕಿನ ಪಾಠಗಳನ್ನು ಹೇಳುತ್ತವೆ. ಅವುಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಸದ್ಗುಣಗಳು ಬೆಳೆಯುತ್ತವೆ. ಪೋಷಕರು ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ಕಲಿಸಬೇಕು. ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶವಾಗಿದೆ. ಪ್ರತಿಯೊಬ್ಬರೂ ಶ್ರಮದಿಂದ ದುಡಿದು ಬದುಕಬೇಕು. ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯ ಮತ್ತು ಶುದ್ಧ ಶ್ರಮ ಸಂಸ್ಕೃತಿಯೇ ಅವರ ಆದರ್ಶವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್‌ (ರಾಜು) ಸೇರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಫ್ರಭಾ ಬೆಲ್ಲದ, ರಾಜುಗೌಡ ಪಾಟೀಲ್‌, ಸುಮಂತ ಗೌಡ ಮೊದಲಾದವರು ಉಪಸ್ಥಿತರಿದ್ದರು.