ಕನ್ನಡಪ್ರಭ ವಾರ್ತೆ ಬೆಳಗಾವಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ.

ಶ್ರೀನಿಧಿ ಸಂತೋಷ್ ನಾವಿ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶ್ರೀನಿಧಿ ಮತ್ತು ಸಂತೋಷ್ 2021ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ-ಹೆಂಡತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕೌಟುಂಬಿಕ ಕಲಹ ಹಾಗೂ ಕಿರುಕುಳಕ್ಕೆ ಬೇಸತ್ತು ಶ್ರೀನಿಧಿ ಮನೆಯ ಮೊದಲ ಮಹಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮದುವೆಯಾದ ದಿನದಿಂದಲೇ ಪತಿ ಸಂತೋಷ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಶ್ರೀನಿಧಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅತ್ತೆ ಸುಧಾ ಹಾಗೂ ಸಂಬಂಧಿಕರಾದ ಸಂಜನಾ, ಪ್ರವೀಣ ಸೂರ್ಯವಂಶ ಮತ್ತು ಶ್ರದ್ಧಾ ಮಹೇಶ ಕೂಡ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಯುವತಿಯನ್ನು ತವರಿನವರ ಸಂಪರ್ಕದಿಂದ ದೂರವಿಟ್ಟು, ಮೊಬೈಲ್‌ ಕಸಿದುಕೊಂಡಿದ್ದಾರೆಂಬುದು ಕುಟುಂಬದವರ ಆರೋಪ. ಏ.9ರಂದು ಶ್ರೀನಿಧಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಾಹಿತಿ ನೀಡಲಾಗಿದ್ದು, ತಕ್ಷಣ ಕುಟುಂಬದವರು ಆಸ್ಪತ್ರೆಗೆ ಧಾವಿಸಿದಾಗ, ಶ್ರೀನಿಧಿ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಕುರಿತು ಪತಿ ಸಂತೋಷ ಮನೆಯ ಮೊದಲ ಮಹಡಿಯ ಕೋಣೆಯ ಕಿಟಕಿಯ ಗ್ರಿಲ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಆದರೆ, ವರದಕ್ಷಿಣೆ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಮೃತಳ ತಾಯಿ ಮಂಗಲ ಯಾದವ ಆರೋಪ ಮಾಡಿದ್ದಾರೆ.


ಈ ಸಂಬಂಧ ಪತಿ ಸಂತೋಷ, ಅತ್ತೆ ಸುಧಾ ಹಾಗೂ ಸಂಬಂಧಿಕರಾದ ಸಂಜನಾ ಮತ್ತು ಶ್ರದ್ಧಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀನಿಧಿ ಕುಟುಂಬದವರು ದೂರು ನೀಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.