ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸಂಭ್ರಮಿಸಿದರು.ವಿಶೇಷವಾಗಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ದಿಕ್ಕನ್ನು ಬದಲಿಸುವ ಸಂಕ್ರಮಣದ ಪರ್ವಕಾಲದಲ್ಲಿ ಕುಟುಂಬ ಸಮೇತ ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿ ಸಂಕ್ರಮನದ ಪರ್ವಕಾಲವನ್ನು ಆಚರಿಸಿದರು.
ಪುಣ್ಯಸ್ನಾನದ ಬಳಿಕ ಭಕ್ತರು ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯಮಂಟಪ ದರ್ಶನ ಪಡೆದು ಭಕ್ತಿ ಮೆರೆದರು. ಪರಸ್ಪರ ಕುಸಿರೆಳ್ಳು ವಿನಿಯೋಗ ಮಾಡಿಕೊಂಡು ದೇವಾಲಯ ಒಳ ಹಾಗೂ ಹೊರ ಆವರಣ, ಉದ್ಯಾನದಲ್ಲಿ ತಂದ ಸಿಹಿ ತಿಂಡಿಗಳ ಭೋಜನ ಸವಿದು ಸಂಭ್ರಮಿಸಿದರು.ಕೆಲವು ಭಕ್ತರು ಪುಣ್ಯ ಸ್ನಾನಕ್ಕಾಗಿಯೇ ಬುಧವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿದರೆ ಇನ್ನೂ ಕೆಲವು ಭಕ್ತರು ಬೆಳಗ್ಗೆ ಬಂದು ಸ್ನಾನ ಮಾಡಿದರು. ಬೆಳಗಿನ ಅವಧಿಯಲ್ಲಿ ಕಡಿಮೆ ಇದ್ದ ಭಕ್ತರ ಸಂಖ್ಯೆ 12 ಗಂಟೆಯ ನಂತರ ಅಧಿಕಗೊಂಡಿತು. ಸಂಗಮನಾಥನ ದರ್ಶನ ಪಡೆಯಲು ಭಕ್ತರು ಸರದಿಯ ಸಾಲಿನಲ್ಲಿ ನಿಂತರು.
ಶರಣ ಮೇಳಕ್ಕೆ ಬಂದ ಭಕ್ತರು ಜನವರಿ 14ರಂದೇ ಸಂಕ್ರಾಂತಿ ಆಚರಿಸಿದ್ದರಿಂದ 15ರಂದು ಪುಣ್ಯ ಸ್ನಾನ ಭಕ್ತರು ಮಾತ್ರ ಇದ್ದರು. ಕಳೆದ ವರ್ಷಕ್ಕಿಂತ ಈ ವರ್ಷ ಪುಣ್ಯಸ್ನಾನದ ಭಕ್ತರ ಸಂಖ್ಯೆ ಕಡಿಮೆಯಿತ್ತು. ಪ್ರತಿ ವರ್ಷ ಬಾದಾಮಿ ಬನಶಂಕರಿ, ಸವದತ್ತಿ ಯಲ್ಲಮ್ಮನ ಜಾತ್ರೆ ಮಂಕರ ಸಂಕ್ರಾಂತಿ, ಶರಣ ಮೇಳ ಏಕಕಾಲದಲ್ಲಿ ಬಂದಿರುತ್ತಿದ್ದವು. ಇದರಿಂದ ಅಧಿಕ ಜನಜಂಗುಳಿ ಉಂಟಾಗುತ್ತಿತ್ತು. ಈ ವರ್ಷ ಎಲ್ಲವೂ ಪ್ರತ್ಯೇಕವಾಗಿ ಬಂದಿರುವುದರಿಂದ ಜನಜಂಗುಳಿ ಪ್ರಮಾಣ ಕಡಿಮೆ ಇದೆ ಎಂದು ವ್ಯಾಪಾರಸ್ಥರು ಹೇಳಿದರು. ಮಧ್ಯಾಹ 12ರ ನಂತರ ಸುತ್ತಮುತ್ತಲಿನ ಜಿಲ್ಲೆಯ ಜನರು ಅಧಿಕ ಸಂಖ್ಯೆಯಲ್ಲಿ ಪುಣ್ಯಸ್ನಾನಕ್ಕೆ ಬಂದಿದ್ದರು. ಕೆಲವು ಭಕ್ತರು ಸೂರ್ಯ ಉದಯವಾಗುವುದನ್ನು ನದಿಯ ದಡದಲ್ಲಿ ಕಾಯುತ್ತಾ ಕುಳಿತ್ತಿದ್ದರು. ಸೂರ್ಯ 6.40ಕ್ಕೆ ಉದಯವಾಗುತ್ತಿದಂತೆಯೇ ನದಿಯಲ್ಲಿ ಸ್ನಾನ ಮಾಡಿ ಸಂಕ್ರಾಂತಿ ಹಬ್ಬ ಆಚರಿಸಿದರು.ದೇಗುಲಕ್ಕೆ ಹೋಗಲು ಪರದಾಟ: ದ್ವಿಚಕ್ರವಾಹನಗಳು ದೇವಾಲಯ ಪ್ರವೇಶ ದ್ವಾರ, ಮಾಹಿತಿ ಕೇಂದ್ರದ ಮುಂದೆ ನಿಲ್ಲಿಸಿದ್ದರಿಂದ ದೇವಾಲಯಕ್ಕೆ ಭಕ್ತರು ಹೊಗಲು ತೊಂದರೆ ಅನುಭವಿಸಿದರು. ದೇವಾಲಯ ಮುಂಭಾಗ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿದ್ದರಿಂದ ದೇವಾಲಯಕ್ಕೆ ಹೊಗಲು ಭಕ್ತರು ತೊಂದರೆ ಅನುಭವಿಸಿದರು.
ಕಡ್ಲೆಹಿಟ್ಟಿನ ಪ್ಯಾಕೇಟ್ ಉಚಿತ ವಿತರಣೆ: ಹುಬ್ಬಳ್ಳಿ ವರದಶ್ರೀ ಫೌಂಡೇಶನ್ ಸಂಸ್ಥೆಯ ಸದಸ್ಯರು ಪುಣ್ಯಸ್ನಾನಕ್ಕೆ ಬರುವ ಭಕ್ತರಿಗೆ ಶಾಂಪೂ, ಸಾಬೂನು, ವಿಷಸ್ನಾನ ಬಿಡಿ, ಕಡ್ಲೆಹಿಟ್ಟಿನಿಂದ ವಿಷಮುಕ್ತ ಪುಣ್ಯಸ್ನಾನ ಮಾಡಿ ಎಂದು ತಿಳಿ ಹೇಳಿ ಕಡ್ಲೆಹಿಟ್ಟಿನ ಪ್ಯಾಕೇಟ್ ಉಚಿತವಾಗಿ ನೀಡಿದರು. ಮಕರ ಸಂಕ್ರಾಂತಿ ನಿಮಿತ್ಯ ಬೆಳಗ್ಗೆ 6 ಗಂಟೆಗೆ 100 ಜನ ಕಾರ್ಯಕರ್ತರು ಕೊರಳಲ್ಲಿ ಜಾಗೃತಿ ನಾಮಫಲ ಹಾಕಿಕೊಂಡು ಬರುವ ಭಕ್ತರಿಗೆ ಕಡ್ಲೆಹಿಟ್ಟಿನ ಪ್ಯಾಕೇಟ್ ನೀಡಿದರು.ವರದಶ್ರೀ ಫೌಂಡೇಶನ್ ಸದಸ್ಯ ಸಿದ್ದು ರಡ್ಡೆರ ಮಾತನಾಡಿ ರಾಜ್ಯದ 200 ಪುಣ್ಯಕ್ಷೇತ್ರದಲ್ಲಿ ಈ ಕಾರ್ಯ ಮಾಡುತ್ತಿದ್ದೆವೆ. ಮಕರ ಸಂಕ್ರಾಂತಿ ನಿಮಿತ್ಯ ಸುಕ್ಷೇತ್ರಕ್ಕೆ ಅಧಿಕ ಭಕ್ತರು ಬರುತ್ತಿರುವುದರಿಂದ 100 ಜನ ಬಂದಿದ್ದೆವೆ. ಉಚಿತವಾಗಿ ಕಡ್ಲೆಹಿಟ್ಟಿನ ಪ್ಯಾಕೇಟ್ ಎಲ್ಲರಿಗೂ ನೀಡುತ್ತಿದ್ದೆವೆ. ಈ ವರ್ಷ 25 ಲಕ್ಷ ಪ್ಯಾಕೇಟ್ ನೀಡಲು ತಯಾರಿಸಿದ್ದೆವೆ ಎಂದರು.