ಸಿಡಿರಣ್ಣ ಹಬ್ಬಕ್ಕೆ ತೆರೆ, ಹಣ್ಣು, ಜವನ ಎಸೆದು ಭಕ್ತಿ ಸಮರ್ಪಣೆ

| Published : Feb 25 2024, 01:45 AM IST

ಸಾರಾಂಶ

ಸಾವಿರಾರು ಭಕ್ತರ ನಡುವೆ ಸಿಡಿರಣ್ಣನನ್ನು ಪಟ್ಟಣ್ಣದ ಪ್ರಮುಖ ಬೀದಿಗಳಲ್ಲಿ ಎಳೆದು ಪಟ್ಟಲದಮ್ಮ ದೇವಸ್ಥಾನದಲ್ಲಿ ಅಂತಿಮಗೊಳಿಸಿದ ನಂತರ ಪೂಜಾರಿ ಕೊಂಡ ಹಾಯುವ ಮೂಲಕ 2 ದಿನಗಳ ಕಾಲ ನಡೆಯುತ್ತಿರುವ ಐತಿಹಾಸಿಕ ಪಟ್ಟಲದಮ್ಮ ಸಿಡಿಹಬ್ಬಕ್ಕೆ ತೆರೆ ಬಿದ್ದಿತ್ತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಾವಿರಾರು ಭಕ್ತರ ನಡುವೆ ಸಿಡಿರಣ್ಣನನ್ನು ಪಟ್ಟಣ್ಣದ ಪ್ರಮುಖ ಬೀದಿಗಳಲ್ಲಿ ಎಳೆದು ಪಟ್ಟಲದಮ್ಮ ದೇವಸ್ಥಾನದಲ್ಲಿ ಅಂತಿಮಗೊಳಿಸಿದ ನಂತರ ಪೂಜಾರಿ ಕೊಂಡ ಹಾಯುವ ಮೂಲಕ 2 ದಿನಗಳ ಕಾಲ ನಡೆಯುತ್ತಿರುವ ಐತಿಹಾಸಿಕ ಪಟ್ಟಲದಮ್ಮ ಸಿಡಿಹಬ್ಬಕ್ಕೆ ತೆರೆ ಬಿದ್ದಿತ್ತು.ಸಂಪ್ರದಾಯದಂತೆ ಕೋಟೆ ಪಟೇಲ್ ಚಿಣ್ಣೇಗೌಡರ ಮನೆ ಎದುರು ಸಿಡಿಯನ್ನು ಕಟ್ಟಲು ಪರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗಂಗಾಮತಸ್ಥರ ಬೀದಿಯ ಪಟ್ಟಲದಮ್ಮ ದೇವಸ್ಥಾನದಿಂದ ತಂದಿದ್ದ ಸಿಡಿರಣ್ಣನ ಗೊಂಬೆಯನ್ನು ಸಿಡಿ ಮರಕ್ಕೆ ಕಟ್ಟಲಾಯಿತು. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಸಿಡಿರಣ್ಣನಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು. ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಬಂದಾಗ ಪೂಜೆ ಸಲ್ಲಿಸಲಾಯಿತು. ಮೂರು ಸುತ್ತು ಹಾಕಿದ ಸಿಡಿರಣ್ಣನಿಗೆ ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪಟ್ಟಲದಮ್ಮನ ಹಾಗೂ ವಳಗೆರೆ ಹುಚ್ಚಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿಡಿ ಅಂತಿಮಗೊಳ್ಳುತ್ತಿದ್ದಂತೆ ರಘು ಕೊಂಡಕ್ಕೆ ಪೂಜೆ ಸಲ್ಲಿಸಿ ಕೊಂಡವನ್ನು ಹಾಯ್ದರು. ನಂತರ ಹಕರೆ ಹೊತ್ತ ಸುಮಾರು 20 ಕ್ಕೂ ಹೆಚ್ಚು ಮಂದಿ ಸರದಿ ಸಾಲಿನಲ್ಲಿ ತೆರಳಿ ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು.

ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಪಟ್ಟಲದಮ್ಮನ ದೇವಸ್ಥಾನದತ್ತ ತೆರಳಿದರು. ನಂತರ ಸಿದ್ದಾರ್ಥನಗರ, ಕಾರ್ತಿನಗರ, ಗಂಗಾಮತಸ್ಥರ ಬೀದಿ, ಅಶೋಕ್ ನಗರ, ಬಸವಲಿಂಗಪ್ಪನಗರದ ಮಹಿಳೆಯರು ಮೆರವಣಿಗೆ ಮೂಲಕ ಘಟ್ಟದೊಂದಿಗೆ ತೆರಳಿ ಪಟ್ಟಲದಮ್ಮನಿಗೆ ಪೂಜೆ ಸಲ್ಲಿಸಿದರು. ಘಟ್ಟಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು. ಘಟ್ಟ ಮೆರವಣಿಗೆಯಲ್ಲಿ ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಶಾಸಕರ ಜೊತೆಗೆ ಹೆಜ್ಜೆ ಹಾಕಿದರು. ತಮಟೆ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಎಸ್ಪಿ ಇ.ಸಿ.ತಿಮ್ಮಯ್ಯ ಹಾಗೂ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಜಾತ್ಯಾತೀತೆಯ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಪಟ್ಟಲದಮ್ಮ ಸಿಡಿಹಬ್ಬವನ್ನು ನೋಡಲು ರಾಜ್ಯದ ವಿವಿಧ ಭಾಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹಬ್ಬದ ಮೆರಗು ಹೆಚ್ಚಿಸಿದರು. ಹಬ್ಬದ ಭಾಗವಾಗಿ ನಡೆದ ವಿವಿಧ ಮನರಂಜನಾ ಕಾರ್ಯಕ್ರಮಗಳು, ಧ್ವನಿವರ್ಧಕ ಶಬ್ಧಕ್ಕೆ ಹೆಜ್ಜೆ ಹಾಕಿದ ಯುವ ಸಮೂಹ ಹೆಜ್ಜೆ ಹಾಕಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ತಹಸೀಲ್ದಾರ್ ಕೆ.ಎನ್.ಲೋಕೇಶ್ ಸೇರಿದಂತೆ ಇತರೆ ಪ್ರಮುಖರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಪಡೆದರು.