ಧರ್ಮಸ್ಥಳ ಲಕ್ಷದೀಪೋತ್ಸ: ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವ

| Published : Nov 29 2024, 01:03 AM IST

ಸಾರಾಂಶ

ಕೆರೆಕಟ್ಟೆಯಲ್ಲಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿರಥದಲ್ಲಿ ಕುಳ್ಳಿರಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ನೆರೆದಿದ್ದ ಭಕ್ತರು ಪುನೀತ ಭಾವದಿಂದ ಮಂಜುನಾಥನ ರಥ ಎಳೆದರು. ದೇವರನ್ನು ದೇವಾಲಯದೊಳಗೆ ಕೊಂಡೊಯ್ಯುವದರೊಂದಿಗೆ ಉತ್ಸವ ಸಂಪನ್ನವಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಎರಡನೇ ದಿನವಾದ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ಮಂಜುನಾಥನಿಗೆ ಪೂಜೆ ಸಲ್ಲಿಸಿ ವಿವಿಧ ವೈದಿಕ ಕ್ರಮಗಳೊಂದಿಗೆ ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ೧೬ ಸುತ್ತು ಪ್ರದಕ್ಷಿಣೆ ಬರಲಾಯಿತು. ಸಂಗೀತ, ಚೆಂಡೆ, ಶಂಖ ಸೇರಿದಂತೆ ಸರ‍್ವವಾದ್ಯಗಳ ಪ್ರದಕ್ಷಿಣೆ ಸೇವೆಯನ್ನು ಮಂಜುನಾಥನಿಗೆ ಸಲ್ಲಿಸಲಾಯಿತು.ಬಳಿಕ ದೇವಾಲಯದ ಹೊರಾಂಗಣದಲ್ಲಿ ಸಾವಿರಾರು ಭಕ್ತರ ಮೆರವಣಿಗೆಯಲ್ಲಿ ದೇವರನ್ನು ವಿಹಾರಕ್ಕೆ ಕೊಂಡೊಯ್ಯಲಾಯಿತು. ದೇವರನ್ನು ಭಕ್ತರ ಭಕ್ತಿಯ ಉದ್ಘೋಷದೊಂದಿಗೆ ಮಂಗಳವಾದ್ಯಗಳ ಸಹಿತ ಕೆರೆಕಟ್ಟೆಗೆ ಕರೆತಂದು ೫ ಸುತ್ತುಗಳ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಲಾಯಿತು. ದೇವಾಲಯದ ಆನೆಗಳಾದ ಲಕ್ಷ್ಮೀ, ಶಿವಾನಿ ಮತ್ತು ಬಸವ ಭೀಷ್ಮ ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದವು.

ಕೆರೆಕಟ್ಟೆಯಲ್ಲಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿರಥದಲ್ಲಿ ಕುಳ್ಳಿರಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ನೆರೆದಿದ್ದ ಭಕ್ತರು ಪುನೀತ ಭಾವದಿಂದ ಮಂಜುನಾಥನ ರಥ ಎಳೆದರು. ದೇವರನ್ನು ದೇವಾಲಯದೊಳಗೆ ಕೊಂಡೊಯ್ಯುವದರೊಂದಿಗೆ ಉತ್ಸವ ಸಂಪನ್ನವಾಯಿತು.

ಧರ್ಮಸ್ಥಳ ಲಕ್ಷದೀಪೋತ್ಸವ: ಇಂದು ಸರ್ವಧರ್ಮ ಸಮ್ಮೇಳನ

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನ ನ.29ರಂದು ಶುಕ್ರವಾರ ಸಂಜೆ 5 ಗಂಟೆಯಿಂದ ಕ್ಷೇತ್ರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.92ನೇ ಅಧಿವೇಶನವನ್ನು ಗೃಹಸಚಿವ ಡಾ.ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಶೋಧಕ ಡಾ.ಜಿ.ಬಿ. ಹರೀಶ, ನಿವೃತ್ತ ಪ್ರಾಂಶುಪಾಲ ಮಡಂತ್ಯಾರುವಿನ ಡಾ. ಜೋಸೆಫ್ ಎನ್.ಎಂ., ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ.ಸಮ್ಮೇಳನದ ಬಳಿಕ ಚೆನ್ನೈ ಶೀಜಿತ್ ಮತ್ತು ಪಾರ್ವತಿ ತಂಡ ದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಶುಕ್ರವಾರ ಸಂಜೆ 5.30ರಿಂದ ಗೋಣಿಕೊಪ್ಪ ಅನ್ವಿತ್ ಕುಮಾರ್ ಸಿ.ವಿ. ಮತ್ತು ಬಳಗದವರಿಂದ ಸಂಗೀತ ರಸಸಂಜೆ, ಬಳಿಕ ಲೀಲಾ ನಾಟ್ಯಕಲಾ ವೃಂದದವರಿಂದ ಭರತ ನೃತ್ಯ, ನಂತರ ಸುಳ್ಯದ ಪಟ್ಟಾಭಿರಾಮ ಅವರಿಂದ ನಗೆ ಹಬ್ಬ ನಡೆಯಲಿದೆ. ಬೆಂಗಳೂರಿನ ಅನನ್ಯಾ ತಂಡದವರಿಂದ ಭರತ ನೃತ್ಯ ಹಾಗೂ ಭ್ರಮಾಲೋಕ ಜಾದೂ ತಂಡದವರಿಂದ ಜಾದು ಜಾತ್ರೆ ನಡೆಯಲಿದೆ.