ಸಾರಾಂಶ
ಮಂಡ್ಯ : ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪದೇ ಪದೇ ಭಿನ್ನ ಧೋರಣೆ ಪ್ರದರ್ಶಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಕಡಿವಾಣ ಹಾಕುವಂತೆ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ಹೈಕಮಾಂಡ್ ಮೊರೆ ಹೋಗಿದ್ದಾರೆ.
ನಗರದ ಅಂಚೆ ಕಚೇರಿ ಬಳಿ ಸೇರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಯತ್ನಾಳ್ ವಿರುದ್ಧ ಬರೆದ ದೂರಿನ ಪತ್ರಕ್ಕೆ ರಕ್ತದಲ್ಲಿ ಸಹಿ ಹಾಕಿ ರವಾನಿಸಿದ್ದಾರೆ.
ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಯತ್ನಾಳ್ ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪಕ್ಷದ ವಿರುದ್ಧವೋ ಅಥವಾ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೋ ಅರ್ಥವಾಗುತ್ತಿಲ್ಲ. ಯತ್ನಾಳ್ ನಿರಂತರವಾಗಿ ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆ. ಇದು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವುದಲ್ಲದೆ, ಕಾರ್ಯಕರ್ತರ ಮನಸ್ಸಿನಲ್ಲಿ ಗೊಂದಲ ಮೂಡಿಸಿದೆ. ಜೊತೆಗೆ ಯಡಿಯೂರಪ್ಪ ಅವರ ಅಭಿಮಾನಿಗಳಿಗೂ ನೋವುಂಟು ಮಾಡಿದೆ ಎಂದಿದ್ದಾರೆ.
ಯತ್ನಾಳ್‌ರವರ ನಡವಳಿಕೆಗೆ ವರಿಷ್ಠರು ಕಡಿವಾಣ ಹಾಕದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಪಕ್ಷದ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಬಿಎಸ್‌ವೈ ಅಭಿಮಾನಿಗಳಾದ ಶಿವಕುಮಾರ ಆರಾಧ್ಯ, ನಂಜುಡಸ್ವಾಮಿ, ಹೊಸಹಳ್ಳಿ ಶಿವು, ಪ್ರಸನ್ನಕುಮಾರ್, ಮಾದರಾಜೇ ಅರಸ್, ಎಚ್.ಕೆ.ಮಂಜುನಾಥ್, ವಿ.ನಾಗರಾಜು ಇತರರಿದ್ದರು.