ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಮಾಜದ ಎಲ್ಲ ವರ್ಗಗಳ ಜನರ ಸರ್ವತೋಮುಖ ಪ್ರಗತಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮಾಡುತ್ತಿರುವ ಸೇವೆ ಮತ್ತು ಸಾಧನೆಗಳು ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಹೈದರಾಬಾದ್‌ನಲ್ಲಿರುವ ಯೂನಿಸೆಫ್ ಕಾರ್ಯಾಲಯದ ಮುಖ್ಯಸ್ಥ ಡಾ. ಝೆಲಾಲೆಮ್ ಬಿರಹಾನು ಟಾಪ್ಸಿ ಹೇಳಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಪ್ರೌಢಶಾಲಾ ವಠಾರದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾ ಸಬಲೀಕರಣ, ಆರ್ಥಿಕ ಒಳಗೊಳ್ಳುವಿಕೆ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಮೂಲ್ಯ ಸೇವೆಯನ್ನು ಅವರು ಶ್ಲಾಘಿಸಿದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಎಲ್ಲರ ಮನೆಗಳನ್ನು ಹಾಗೂ ಮನಗಳನ್ನು ಬೆಳಗಿಸುವ ಪವಿತ್ರ ಸಮಾರಂಭವಾಗಿದೆ. ಸರ್ವಧರ್ಮಿಯರೂ ಶ್ರದ್ಧಾ-ಭಕ್ತಿಯಿಂದ ದೇವರ ದರ್ಶನ ಪಡೆದು, ಸೇವೆ ಮಾಡಿ ಮಾನಸಿಕ ಶಾಂತಿ, ನೆಮ್ಮದಿ ಹೊಂದುತ್ತಾರೆ. ಲೌಕಿಕ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ. ಪ್ರತಿವರ್ಷವೂ ಲಕ್ಷದೀಪೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಮನೋರಂಜನಾ ಕಾರ್ಯಕ್ರಮಗಳು, ಸರ್ವಧರ್ಮಸಮ್ಮೇಳನ ಮತ್ತು ಸಾಹಿತ್ಯಸಮ್ಮೇಳನ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮ್ಯೂಸಿಯಂ ಮೊದಲಾದವುಗಳನ್ನು ವೀಕ್ಷಿಸಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಾರೆ. ವಸ್ತುಪ್ರದರ್ಶನದಲ್ಲಿರುವ ಮಳಿಗೆಗಳು ಎಲ್ಲ ವರ್ಗದ ಪ್ರೇಕ್ಷಕರಿಗೂ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತವೆ. ಸರ್ಕಾರದ ಮಳಿಗೆಗಳು ವಿವಿಧ ಯೋಜನೆಗಳ ಮಾಹಿತಿಯನ್ನೂ ಕೊಡುತ್ತವೆ ಎಂದರು. ಮಾಹಿತಿಯ ಕಣಜ: ಧರ್ಮಸ್ಥಳದಲ್ಲಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ೩೫೦ಕ್ಕೂ ಹೆಚ್ಚು ಮಳಿಗೆಗಳಿದ್ದು, ಅಪೂರ್ವ ಮಾಹಿತಿ, ಮಾರ್ಗದರ್ಶನದ ಕಣಜವಾಗಿದೆ.
ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಹಾಗೂ ಮಹಿಳಾ ಕಲ್ಯಾಣ ಇಲಾಖೆ, ಜೀವವಿಮೆ, ಗ್ರಾಮಾಭಿವೃಧ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಡಕೆ ಹಾಳೆತಟ್ಟೆ ತಯಾರಿ, ಮಡಿಕೆ ತಯಾರಿ, ಗ್ರಾಮೀಣ ಕರಕುಶಲ ಕಲೆಗಳು ಇತ್ಯಾದಿ ವೈವಿಧ್ಯಮಯ ಮಳಿಗೆಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ನ.೩೦ರ ವರೆಗೆ ಪ್ರತಿದಿನ ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೧೦ ಗಂಟೆ ವರೆಗೂ ವಸ್ತುಪ್ರದರ್ಶನ ವೀಕ್ಷಣೆಗೆ ಉಚಿತ ಅವಕಾಶವಿದೆ. ಪ್ರತಿದಿನ ಸಂಜೆ ಆರು ಗಂಟೆಯಿಂದ ವಸ್ತುಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ರಾಜಾ ಬಿ.ಎಸ್., ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ಪಿ. ವಿಶ್ವನಾಥ್, ರಾಷ್ಟ್ರೀಯ ಸೇವಾಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. ಜನಾರ್ದನ್ ಮತ್ತು ಎಸ್.ಡಿ.ಎಂ. ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಜನಾರ್ದನ್ ಉಪಸ್ಥಿತರಿದ್ದರು.