ಸ್ವಯಂ ಸೇವಾ ಸಂಸ್ಥೆಗಳ ಸಾಲಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

| Published : Nov 26 2024, 12:45 AM IST

ಸ್ವಯಂ ಸೇವಾ ಸಂಸ್ಥೆಗಳ ಸಾಲಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿಯಲ್ಲಿ ಸೋಮವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಕುರಿತು ಯೋಜನಾಧಿಕಾರಿ ಪ್ರಕಾಶ್ ವೈ.ನಾಯ್ಕ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

1982ರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಮರ್ಥ್ಯ ವರ್ಧನೆಗಾಗಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಮಾರು 40 ವರ್ಷಗಳ ಸುಧೀರ್ಘ ಪ್ರಯಾಣದಲ್ಲಿ ಸ್ವಾವಲಂಬನೆ, ಆರ್ಥಿಕ ಸಾಮರ್ಥ್ಯ, ಕೌಶಲ್ಯಭಿವೃದ್ಧಿಯನ್ನು ಸಬಲೀಕರಣದ ವ್ಯಾಖ್ಯೆಯಲ್ಲಿ ಸೇರಿಸಿಕೊಂಡಿದೆ. ಪ್ರಸ್ತುತ ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಾಲೂಕಿನ ಯೋಜನೆ-1ರ ಯೋಜನಾಧಿಕಾರಿ ಪ್ರಕಾಶ್ ವೈ.ನಾಯ್ಕ್ ಹೇಳಿದರು.ಸೋಮವಾರ ತಾಲೂಕಿನ ಯೋಜನೆ ಕಚೇರಿ-1ರಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವೈಖರಿ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ 2007-08 ರಿಂದ ಸುಮಾರು 17ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಗಳಲ್ಲಿ ಸುಸ್ಥಿರ ಪ್ರಗತಿಯ ಅನೇಕ ಮಾದರಿಗಳನ್ನು ಪ್ರಾರಂಭಿಸಿದೆ ಎಂದರು.

ಯೋಜನೆಯು ತನ್ನ ಪಾಲುದಾರ ಕುಟುಂಬಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಬಡವರು ಯಾವುದೇ ತೊಂದರೆ ಇಲ್ಲದೆ ಸೌಲಭ್ಯಗಳನ್ನು ಪಡೆಯಲು ನೆರವಿಗಾಗಿ ಯೋಜನೆಯು ಯಶಸ್ವಿಯಾಗಿದೆ ಎಂದರು.

ಸಾಮೂಹಿಕವಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಗ್ರಾಮಗಳಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವರಮಹಲಕ್ಷ್ಮಿ ವ್ರತವನ್ನು ಆಯೋಜನೆ ಮಾಡಿ ಜನರಲ್ಲಿ ಧಾರ್ಮಿಕ ಸಂಸ್ಕೃತಿಯ ಮತ್ತು ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 51 ಜನ ಸೇವಾಪ್ರತಿನಿಧಿಗಳು, 35 ಜನ ಸಿಎಸ್‌ಸಿ ಸೇವಾದಾರರು, 35 ಜನ ಸುವಿಧಾ ಸಹಾಯಕರು, 2 ಜನ ಶುದ್ಧಗಂಗಾ ಪ್ರೇರೇಕರು 24 ಜನ ಖಾಯಂ ಸಿಬ್ಬಂದಿಗಳು ತಾಲೂಕು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಯೋಜನೆಯ ಕಾರ್ಯ ವೈಖರಿಗಳನ್ನು ಪ್ರಶಂಸಿಸಿದರು. ಈ ವೇಳೆ ಯೋಜನೆ-2ರ ಯೋಜನಾಧಿಕಾರಿ ಅಜಯ್‌ಕುಮಾರ್ ಉಪಸ್ಥಿತರಿದ್ದರು.

ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಈ ಬಾರಿ ನ.26 ರಿಂದ 30ರವರೆಗೆ ಲಕ್ಷದೀಪೋತ್ಸವ ಜರುಗಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ.29 ಮತ್ತು 30 ರಂದು 92ನೇ ವರ್ಷದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು, ವಸ್ತು ಪ್ರದರ್ಶನ, ಲಲಿತ ಕಲಾಗೋಷ್ಠಿ ಹಾಗು ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಿದರು.