ಧಾರವಾಡ ಆಧಾರ್ ಕೇಂದ್ರ ನಿರ್ವಹಿಸುವ ಸೇವಾ ಸಂಸ್ಥೆಯ ಗುತ್ತಿಗೆಯು ಮುಗಿದಿರುವ ಹಿನ್ನೆಲೆಯಲ್ಲಿ ಸ್ಥಳಾಂತರವಾಗಿದೆ ಎಂಬ ಮಾಹಿತಿ ಇದೆ. ಆದರೆ, ಕಳೆದ ನ. 28ರಂದು ಬಾಗಿಲು ಬಂದ್‌ ಮಾಡಿರುವ ಆಧಾರ್ ಸೇವಾ ಕೇಂದ್ರವು, ಹುಬ್ಬಳ್ಳಿಯ ಕೇಶ್ವಾಪೂರಕ್ಕೆ ಸ್ತಳಾಂತರವಾಗಿದೆ ಎಂದು ಕೇಂದ್ರದ ಎದುರು ನಾಮಫಲಕ ಹಾಕಲಾಗಿದೆ.

ಧಾರವಾಡ:

ಇಲ್ಲಿಯ ಕೆ.ಸಿ. ಪಾರ್ಕ್‌ ಅಂಚೆ ಕಚೇರಿ ಎದುರಿದ್ದ ಆಧಾರ್ ಸೇವಾ ಕೇಂದ್ರವು ದಿಢೀರ್‌ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದು, ಆಧಾರ್ ಸೇವೆಗಾಗಿ ಧಾರವಾಡದ ಜನರು ತೀವ್ರ ಪರದಾಡುವಂತಾಗಿದೆ.

ಈ ಆಧಾರ್ ಕೇಂದ್ರ ನಿರ್ವಹಿಸುವ ಸೇವಾ ಸಂಸ್ಥೆಯ ಗುತ್ತಿಗೆಯು ಮುಗಿದಿರುವ ಹಿನ್ನೆಲೆಯಲ್ಲಿ ಸ್ಥಳಾಂತರವಾಗಿದೆ ಎಂಬ ಮಾಹಿತಿ ಇದೆ. ಆದರೆ, ಕಳೆದ ನ. 28ರಂದು ಬಾಗಿಲು ಬಂದ್‌ ಮಾಡಿರುವ ಆಧಾರ್ ಸೇವಾ ಕೇಂದ್ರವು, ಹುಬ್ಬಳ್ಳಿಯ ಕೇಶ್ವಾಪೂರಕ್ಕೆ ಸ್ತಳಾಂತರವಾಗಿದೆ ಎಂದು ಕೇಂದ್ರದ ಎದುರು ನಾಮಫಲಕ ಹಾಕಲಾಗಿದೆ. ಹೀಗಾಗಿ ನಿತ್ಯ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಿಂದ ಜನರು ಆಧಾರ್ ಸೇವೆ ಪಡೆಯಲು ಬಂದ್‌ ನಾಮಫಲಕ ನೋಡಿ ವಾಪಾಸ್ಸಾಗಬೇಕಿದೆ.

ಗ್ರಾಹಕ ಸ್ನೇಹಿಯಾಗಿದ್ದ ಕೇಂದ್ರ:

ಹೊಸ ಆಧಾರ್್ ಕಾರ್ಡ್ ನೋಂದಣಿ, ನವೀಕರಣಕ್ಕಾಗಿ ಈ ಕೇಂದ್ರ ಧಾರವಾಡ ಜನತೆಗೆ ತುಂಬ ಅನುಕೂಲವಾಗಿತ್ತು. ನಿತ್ಯ 100ಕ್ಕೂ ಹೆಚ್ಚು ಜನರು ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಆಧಾರ್ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈ ಕೇಂದ್ರಕ್ಕೆ ಬರುವ ಜನರಿಗೆ ಕೂರಲು ಸ್ಥಳಾವಕಾಶ, ಟೋಕನ್‌ ವ್ಯವಸ್ಥೆ, ಸೇವಾ ಸಿಬ್ಬಂದಿ ಸೇರಿದಂತೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸೇವೆ ನೀಡುವ ಗ್ರಾಹಕ ಸ್ನೇಹಿಯಾಗಿತ್ತು. ಇದೀಗ ಬಂದ್‌ ಆಗಿದ್ದರಿಂದ ಜನತೆಗೆ ಅದರಲ್ಲೂ ಗ್ರಾಮೀಣ ಜನತೆಗೆ ತೀವ್ರ ಅನಾನುಕೂಲವಾಗಿದೆ.

ಈ ಆಧಾರ್ ಸೇವಾ ಕೇಂದ್ರ ಹೊರತುಪಡಿಸಿ ಬ್ಯಾಂಕ್‌, ಅಂಚೆ ಕಚೇರಿ, ಹು-ಧಾ ಒನ್‌ ಕೇಂದ್ರ ಸೇರಿ ಕೆಲವು ಕಡೆಗಳಲ್ಲಿ ಈ ಸೇವೆ ಲಭ್ಯ ಇದೆ. ಜತೆಗೆ ಆನ್‌ಲೈನ್‌ ಮೂಲಕವು ತಮ್ಮ ಆಧಾರ್ದಲ್ಲಿನ ತಿದ್ದುಪಡಿ ಮಾಡಬಹುದು. ಆದರೆ, ಆಧಾರ್ ಸೇವೆಗಾಗಿಯೇ ಮೀಸಲು ಸಿಬ್ಬಂದಿ ಇಲ್ಲ. ಹೀಗಾಗಿ ಆಧಾರ್ದಲ್ಲಿರುವ ಹೆಸರು, ವಿಳಾಸ, ಮೊಬೈಲ್‌, ಇಮೇಲ್, ಫೋಟೋ, ಬೆರಳಚ್ಚು, ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ ಮತ್ತು ಐರಿಸ್ ನವೀಕರಣದಂತಹ ಸೇವೆಗಳನ್ನು ಪಡೆಯಲು ವಿಳಂಬವಾಗುತ್ತಿದೆ.

ವಾರದ ಏಳು ದಿನವೂ (ಸೋಮವಾರದಿಂದ ಭಾನುವಾರ) ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಆಧಾರ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಅಂಚೆ ಕಚೇರಿ ಸೇರಿ ಉಳಿದ ಸೇವಾ ಕೇಂದ್ರಗಳಿಗೆ ಇದು ಸಾಧ್ಯವಿಲ್ಲ ಎನ್ನುವುದು ಗ್ರಾಹಕರ ದೂರು.

ಶೀಘ್ರ ಮರು ಆರಂಭಿಸಿ:

ಕಳೆದ 15 ದಿನಗಳಿಂದ ಧಾರವಾಡದ ಆಧಾರ್ ಸೇವಾ ಕೇಂದ್ರದ ಬಾಗಿಲು ಮುಚ್ಚಿದ್ದು ತೀವ್ರ ಬೇಸರ ಮೂಡಿಸಿದೆ. ಉಳಿದೆಲ್ಲಾ ಆಧಾರ್ ಸೇವಾ ಕೇಂದ್ರಗಳಿಗಿಂತ ಈ ಕೇಂದ್ರ ಗ್ರಾಹಕರ ಸ್ನೇಹಿಯಾಗಿತ್ತು. ಬರೀ ಧಾರವಾಡ ನಗರವಲ್ಲದೇ ಗ್ರಾಮೀಣ ಜನರು ಈ ಕೇಂದ್ರದಿಂದ ಸಾಕಷ್ಟು ಸೇವೆ ಪಡೆಯುತ್ತಿದ್ದರು. ಜೊತೆಗೆ ಭಾನುವಾರ ಸಹ ನಾವು ಆಧಾರ್ದಲ್ಲಿನ ತಿದ್ದುಪಡಿ ಮಾಡಿಕೊಳ್ಳುತ್ತಿದ್ದೇವು. ಇದೀಗ ಧಾರವಾಡ ಜನತೆಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಜಿಲ್ಲಾಡಳಿತವು ಆಧಾರ್ ಸೇವಾ ಕೇಂದ್ರದಲ್ಲಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಕೂಡಲೇ ಮರು ಆರಂಭ ಮಾಡಬೇಕು ಎಂದು ಹೆಸ್ಕಾಂ ನಿವೃತ್ತ ಎಂಜಿನಿಯರ್‌ ಎನ್‌.ಎಸ್‌. ಮಗನೂರ ಆಗ್ರಹಿಸುತ್ತಾರೆ.

ಯುಐಡಿಎಐ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕಳೆದ ಆರು ವರ್ಷಗಳಿಂದ ಈ ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ನ. 30ಕ್ಕೆ ಸೇವಾ ಪೂರೈಕೆದಾರರ ಟೆಂಡರ್ ಕೊನೆಗೊಂಡಿದೆ. ಹೊಸ ಟೆಂಡರ್ ಪಡೆದ ನಂತರವೇ ಈ ಕೇಂದ್ರಗಳು ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಈ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹೇಳಿದ್ದಾರೆ. ಸೇವಾ ಪೂರೈಕೆದಾರರ ಟೆಂಡರ್‌ ಮುಗಿಯುವ ಮುಂಚೆಯೇ ಟೆಂಡರ್‌ ಕರೆದು ಆಧಾರ್ ಕೇಂದ್ರ ಬಂದ್‌ ಆಗದಂತೆ ಎಚ್ಚರ ವಹಿಸಬೇಕಿತ್ತು ಎಂದು ಆಡಳಿತ ವ್ಯವಸ್ಥೆ ಬಗ್ಗೆ ಧಾರವಾಡ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.