ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮ ಪ್ರಗತಿ ಸಾಧಿಸಿಬೇಕು ಕೆ.ಇ. ಚಿದಾನಂದಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮ ಪ್ರಗತಿ ಸಾಧಿಸಿಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಕುರಿತು ತಾಲೂಕು ಮಟ್ಟದಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಸರ್ಕಾರದ ನಿರ್ದೇಶನವಿದ್ದು, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ತಾಲೂಕಿನಲ್ಲಿ 3-4 ಗ್ರಾಮ ಪಂಚಾಯತ್ ಫಲಾನುಭವಿಗಳ ಸಮಸ್ಯೆ ಕುರಿತು ಗ್ರಾಮ ಸಭೆ ಅಥವಾ ಇತರೆ ಪೂರಕ ಸಭೆ ಜರುಗಿಸಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಒಟ್ಟು 2, 99,004 ಫಲಾನುಭವಿಗಳ ಪೈಕಿ 2,89,938 ಫಲಾನುಭವಿಗಳಿಗೆ ಸಹಾಯಧನ ನೆರವು ತಲುಪಿದೆ. ಶೇ. 96.97ರಷ್ಟು ಪ್ರಗತಿಯಾಗಿದೆ. ಈ ವರೆಗೆ ಈ ಯೋಜನೆಯಡಿ ಜಿಲ್ಲೆಗೆ ₹1259.16 ಕೋಟಿ (2023 ರ ಆಗಸ್ಟ್‌ ತಿಂಗಳಿನಿಂದ 2025 ಆಗಸ್ಟ್‌ ವರೆಗೆ) ಸರ್ಕಾರ ಪಾವತಿಸಿದೆ. ಜಿಲ್ಲೆಯಲ್ಲಿ 223 ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಸಹಾಯಧನ ದೊರಕಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಅವರು ಸಭೆಗೆ ತಿಳಿಸಿದರು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಲಾಗಿದ್ದು, ಜಿಲ್ಲೆಯಲ್ಲಿ

6 ಘಟಕಗಳಿವೆ. ದಿನಕ್ಕೆ 68 ಸಾವಿರಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಈ ವರೆಗೆ ಒಟ್ಟು 622.50 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ₹244.47 ಕೋಟಿ (2023 ರ ಜೂನ್ ತಿಂಗಳಿನಿಂದ 2025ರ ಅಕ್ಟೋಬರ್ ವರೆಗೆ) ವೆಚ್ಚವಾಗಿದೆ ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಬಳ್ಳಾರಿ ತಾಲೂಕು ಗ್ಯಾರಂಟಿ ಅಧ್ಯಕ್ಷರು ಪ್ರತಿಕ್ರಿಯಿಸಿ, ಬಳ್ಳಾರಿ ಜಿಲ್ಲೆಯ ಕಾರೆಕಲ್ಲು ಗ್ರಾಮಕ್ಕೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್ ತೊಂದರೆಯಾಗುತ್ತಿದ್ದು, ಹೆಚ್ಚಿನ ಬಸ್ ಕಾರ್ಯಾಚರಣೆ ನಡೆಸಬೇಕು ಎಂದು ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡ 2.97 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಪ್ರಯೋಜನ ತಲುಪಿದ್ದು, ಪ್ರಗತಿ ಪ್ರಮಾಣ ಶೇ. 98 ಆಗಿದೆ. ಈ ಯೋಜನೆಗೆ ₹374 ಕೋಟಿ ವೆಚ್ಚವಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷರು ಜಿಲ್ಲೆಯಲ್ಲಿ ಪ್ರತಿ ಮನೆಗೂ ಮೀಟರ್ ಇರುವ ಮತ್ತು ಇಲ್ಲದೆ ಇರುವ ಬಗ್ಗೆ ಮಾಹಿತಿ ನೀಡಬೇಕು. ಮೀಟರ್‌ನ ದರದ ಬಗ್ಗೆ ಮತ್ತು ಪ್ರತಿ ಮನೆಗೆ ಮೀಟರ್ ಅವಳವಡಿಸಿಕೊಳ್ಳುವುದರ ಬಗ್ಗೆ ಭಿತ್ತಿಪತ್ರ ಹೊರಡಿಸಿ ಪ್ರತಿ ತಾಲ್ಲೂಕು ಅಧ್ಯಕ್ಷರಿಗೆ ವಿತರಿಸಿ, ಮೀಟರ್ ಅಳವಡಿಕೆಯ ಬಗ್ಗೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.ಜೆಸ್ಕಾಂ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಮೀಟರ್ ಅಳವಡಿಕೆಗೆ ₹2 ಸಾವಿರ ಒಳಗೆ ದರ ನಿಗದಿ ಮಾಡಿದ್ದು, ಪ್ರತಿ ಮನೆಗೂ ಮೀಟರ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡು ಗ್ಯಾರಂಟಿ ಅನುಷ್ಠಾನಕ್ಕೆ ಹಾಗೂ ಅರ್ಹರಿಗೆ ಯೋಜನೆ ತಲುಪಿಸುವಲ್ಲಿ ಇರುವ ಸಮಸ್ಯೆ ಹಾಗೂ ಪರಿಹಾರ ಕುರಿತು ಚರ್ಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಎಂ.ಆಶಾಲತಾ, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗೋನಾಳ್ ಎಂ. ನಾಗಭೂಷಣ ಗೌಡ, ಕುರುಗೋಡು ತಾಲೂಕು ಅಧ್ಯಕ್ಷ ಜಿ. ಬಸವನಗೌಡ, ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ ಮಾರುತಿ ವರಪ್ರಸಾದ್ ರೆಡ್ಡಿ, ಸಂಡೂರು ತಾಲ್ಲೂಕು ಅಧ್ಯಕ್ಷ ನೂರುದ್ಧೀನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಸೇರಿದಂತೆ ತಾಪಂ ಇಒಗಳು ಹಾಗೂ ಇತರರು ಉಪಸ್ಥಿತರಿದ್ದರು.