ಕೇವಲ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ತಿಳಿದಿದ್ದರೆ ಸಾಲದು. ಅದರ ಹಿಂದಿರುವ ಕರಾಳ ಮುಖಗಳಾದ ಸೈಬರ್ ವಂಚನೆ, ಡೇಟಾ ಕಳ್ಳತನ ಮತ್ತು ಖಾಸಗಿತನದ ಉಲ್ಲಂಘನೆಗಳ ಬಗ್ಗೆಯೂ ಅರಿವಿರಬೇಕು.
ನವಲಗುಂದ:
ಪ್ರಸ್ತುತ ಜಗತ್ತು ಡಿಜಿಟಲ್ ಮಯವಾಗಿದೆ. ತಂತ್ರಜ್ಞಾನವು ಬೆಳೆದಂತೆ ಅಪರಾಧಗಳ ಸ್ವರೂಪವೂ ಬದಲಾಗಿದೆ. ಇಂದಿನ ದಿನಗಳಲ್ಲಿ ''''ಎನ್‌ಕ್ರಿಪ್ಶನ್'''' ಮತ್ತು ಸೈಬರ್ ಅಪರಾಧಗಳು ಮಾನವ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಯುವಜನತೆ ಈ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನವೀನ್ ಎಫ್. ಡಿಸೋಜಾ ಹೇಳಿದರು.ತಾಲೂಕಿನ ಕಾಲವಾಡ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಆಯೋಜಿಸಲಾಗಿದ್ದ ''''ಡಿಜಿಟಲ್ ಯುಗದಲ್ಲಿ ಕಾನೂನು ಅರಿವು'''' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇವಲ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ತಿಳಿದಿದ್ದರೆ ಸಾಲದು. ಅದರ ಹಿಂದಿರುವ ಕರಾಳ ಮುಖಗಳಾದ ಸೈಬರ್ ವಂಚನೆ, ಡೇಟಾ ಕಳ್ಳತನ ಮತ್ತು ಖಾಸಗಿತನದ ಉಲ್ಲಂಘನೆಗಳ ಬಗ್ಗೆಯೂ ಅರಿವಿರಬೇಕು ಎಂದು ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಸ್ತೂರಿ ದಳವಾಯಿ ಮಾತನಾಡಿ, ಓರ್ವ ನಿಜವಾದ ಸ್ವಯಂ ಸೇವಕನು ಕೇವಲ ದೈಹಿಕ ಶ್ರಮದಲ್ಲಿ ಮಾತ್ರವಲ್ಲ, ಹೃದಯ ಮತ್ತು ಮನಸ್ಸಿನಿಂದಲೂ ಅತ್ಯುತ್ತಮವಾಗಿರಬೇಕು ಆಗ ಮಾತ್ರ ನಾವು ಸುಂದರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಆನಂದ ಮುರಾಳ, ನ್ಯಾಯವಾದಿ ಎಸ್.ಎನ್. ಡಂಬಳ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಆರ್. ಎಸ್. ಹಿರೇಮಠ ಸೇರಿದಂತೆ ಹಲವರಿದ್ದರು.