ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಗಂಡ-ಹೆಂಡತಿ ಹಾಗೂ ಮುದ್ದಾದ ಹೆಣ್ಣು ಮಗು. ಐದು ವರ್ಷಗಳ ಸುಂದರ ಸಂಸಾರಕ್ಕೆ ಗೃಹಿಣಿಯೊಬ್ಬಳು ಪರಪುರುಷನ ಮೋಹದ ಆಸೆಗೆ ಬಿದ್ದು ಗಂಡನನ್ನು ಹತ್ಯೆ ಮಾಡಿರುವ ಆರೋಪ ಈಗ ಕೇಳಿಬಂದಿದ್ದು ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಸಂಬಂಧದ ಆಸೆಗೆ ಬಿದ್ದ ಪತ್ನಿ ಭಾಗ್ಯಶ್ರೀ ಬಡಿಗೇರ ಎಂಬಾಕೆ ತನ್ನ ಪ್ರಿಯಕರ ದೀಪಕ ನಾವಾಡಿ ಎಂಬಾತನ ಮಾತು ಕೇಳಿ ಗಂಡ ಅರುಣಕುಮಾರ ಬಡಿಗೇರನನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾಳೆ ಎಂಬುವುದು ಕೇಳಿಬಂದಿರುವ ಆರೋಪ. ಮೇ 6ರಂದು ಈ ಘಟನೆ ನಡೆದಿದ್ದು, ಎರಡೂವರೆ ತಿಂಗಳ ಬಳಿಕ ಆಕೆಯ ಮೊಬೈಲ್‌ನಲ್ಲಿದ್ದ ಚಾಟಿಂಗ್‌ ಇತಿಹಾಸ ಆಕೆಯ ಕೃತ್ಯವನ್ನು ಬಯಲು ಮಾಡಿದೆ ಎನ್ನಲಾಗಿದೆ. ಈಗ ಪೊಲೀಸರು ತೀವ್ರ ವಿಚಾರಣೆ ಕೂಡ ನಡೆಸುತ್ತಿದ್ದಾರೆ.

ಹತ್ಯೆ ಮಾಡಿ ಹೃದಯಾಘಾತ ಎಂದಿದ್ದಳು!:

ಇಂಡಿ ಪಟ್ಟಣದ ನಿವಾಸಿ ಹಾಗೂ ಬಡಗಿತನ ವೃತ್ತಿ ಮಾಡಿಕೊಂಡಿದ್ದ ಅರುಣಕುಮಾರ ಬಡಿಗೇರ (28) ಮೃತಪಟ್ಟವನು. ಮೇ 6ರಂದು ಅರುಣಕುಮಾರ ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎಂದು ಪತ್ನಿ ಭಾಗ್ಯಶ್ರೀ ಗಂಡನ ಕುಟುಂಬಸ್ಥರಿಗೆ ಹಾಗೂ ಊರಿನ ಜನರಿಗೆಲ್ಲ ಹೇಳಿ ನಂಬಿಸಿದ್ದಳು. ಇದನ್ನೇ, ನಂಬಿದ್ದ ಕುಟುಂಬಸ್ಥರು ಅರುಣಕುಮಾರ ಬಡಿಗೇರನ ಮೃತದೇಹವನ್ನು ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೇ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದರು. ಭಾಗ್ಯಶ್ರೀ ತನ್ನ ಪ್ರಿಯತಮ ದೀಪಕ ನಾವಾಡಿ ಎಂಬಾತನೊಂದಿಗೆ ಮಾಡಿದ್ದ ಚಾಟಿಂಗ್‌ ಹಾಗೂ ವಿಡಿಯೋಕಾಲ್ ಸ್ಕ್ರೀನ್‌ಶಾಟ್‌ಗಳು ಇದೀಗ ಪತ್ತೆಯಾಗಿವೆ. ಆಕೆಯ ಫೋನ್‌ನಲ್ಲಿದ್ದ ಚಾಟಿಂಗ್‌ಗಳು ಹಾಗೂ ಪಕ್ಕದ ಮನೆಯವರ ಫೋನಿನಿಂದ ಆಕೆ ತನ್ನ ಪ್ರಿಯಕರನೊಂದಿಗೆ ಮಾತನಾಡಿದ ಆಡಿಯೋಗಳಿಂದ ಘಟನೆ ನಡೆದ ಎರಡೂವರೆ ತಿಂಗಳ ಬಳಿಕ ಅರುಣಕುಮಾರ ಸಾವಿನ ನೈಜತೆ ಈಗಷ್ಟೇ ಹೊರಬರಬೇಕಿದೆ.


ಅಫಜಲಪುರ ತಾಲೂಕಿನ ಮಣೂರ ಗ್ರಾಮದವಳಾದ ಭಾಗ್ಯಶ್ರೀಯನ್ನು ಕಳೆದ ಐದು ವರ್ಷಗಳ ಹಿಂದೆ ಅರುಣಕುಮಾರ ಮದುವೆಯಾಗಿದ್ದ. ಈಕೆಗೆ ಹೆಣ್ಣುಮಗು ಕೂಡ ಇದೆ. ಆದರೆ, ತನ್ನದೇ ಕ್ಲಾಸ್‌ಮೇಟ್‌ ಆಗಿದ್ದ ಮಣೂರಿನ ದೀಪಕ ನಾವಾಡಿ ಎಂಬಾತನೊಂದಿಗೆ ಪ್ರೀತಿ, ಪ್ರೇಮವೆಂದು ಅನೈತಿಕ ಸಂಬಂಧ ಹೊಂದಿದ್ದ ಭಾಗ್ಯಶ್ರೀಯ ವಿಚಾರ ಗಂಡ ಅರುಣಕುಮಾರನಿಗೆ ಗೊತ್ತಾಗಿದೆ. ಇದರಿಂದ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಇಬ್ಬರೂ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದರು. ದೀಪಕನ ಮಾರ್ಗದರ್ಶನದಂತೆ ಮೇ 5ರ ರಾತ್ರಿ ಭಾಗ್ಯಶ್ರೀಯು ತನ್ನ ಗಂಡನಿಗೆ ಊಟದಲ್ಲಿ ನಿದ್ರೆಮಾತ್ರೆ ಹಾಕಿದ್ದಾಳೆ. ಬಳಿಕ ಮೇ 6ರ ಬೆಳಗಿನ ಜಾವ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಊರಿನವರೆಲ್ಲ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನಂಬಿಸಿದ್ದಾಳೆ ಎಂದು ಅರುಣಕುಮಾರ ಕುಟುಂಬಸ್ಥರು ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

--------

ಕೋಟ್....

ಮೇ 6ರ ಬೆಳಗಿನ ಜಾವ ನಮ್ಮ ಸಹೋದರ ಒಮ್ಮೆಲೆ ಚೀರಾಟ ಮಾಡಿ ಮೃತಪಟ್ಟಿದ್ದನು. ಇದನ್ನು ಭಾಗ್ಯಶ್ರೀ ಹೃದಯಾಘಾತ ಎಂದು ಬಿಂಬಿಸಿದ್ದಳು. ಅದನ್ನೇ ನಂಬಿದ ಎಲ್ಲರೂ ಆತನ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸದೆ ಅಗ್ನಿಸ್ಪರ್ಶ ಮಾಡಿದ್ದರು. ಬಳಿಕ ಭಾಗ್ಯಶ್ರೀಯೇ ಆಕೆಯ ಪ್ರಿಯಕರನ ಮಾತು ಕೇಳಿ ಅರುಣಕುಮಾರನನ್ನು ನಿದ್ರೆಮಾತ್ರೆ ಹಾಕಿ ಕತ್ತು ಹಿಸುಕಿ ಸಾಯಿಸಿದ್ದಾಳೆ ಎಂಬುದು ಗೊತ್ತಾಗಿದೆ. ಪೊಲೀಸರು ಇವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿದೆ.

ಅಶ್ವಿನಿ ಸುತಾರ, ಅರುಣಕುಮಾರನ ಸಹೋದರಿ.ಮೇ 6 ರಂದು ಇಂಡಿಯಲ್ಲಿ ನಡೆದ ಅರುಣಕುಮಾರ ಬಡಿಗೇರ ಸಾವು ಹೃದಯಾಘಾತವಲ್ಲ ಕೊಲೆಯೆಂದು ಕುಟುಂಬಸ್ಥರು ಆರೋಪಿಸಿದ್ದು, ಜುಲೈ 19ರಂದು ಇಂಡಿ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ಮಹಿಳೆಯ ವಿಚಾರಣೆ ಕೈಗೊಳ್ಳಲಾಗಿದೆ. ಹಾಗೂ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲೇ ತಪ್ಪಿತಸ್ಥರ ಬಂಧನವಾಗಲಿದೆ.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.

-----

ಬಾಕ್ಸ್‌..

ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ..?:

ಘಟನೆ ನಡೆದ ಎರಡು ತಿಂಗಳ ಬಳಿಕ ಆಕೆಯ ಫೋನ್‌ನಲ್ಲಿದ್ದ ದೀಪಕನೊಂದಿಗಿನ ಚಾಟಿಂಗ್ ಹಾಗೂ ವಿಡಿಯೋ ಕಾಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ನೋಡಿದ ಕುಟುಂಬಸ್ಥರಿಗೆ ಭಾಗ್ಯಶ್ರೀಯೇ ಕೊಲೆ ಮಾಡಿರುವುದು ಗೊತ್ತಾಗಿದೆ. ಬಳಿಕ ಕಳೆದ ತಿಂಗಳು ಮನೆಯವರೆಲ್ಲ ವಿಚಾರಿಸಿದಾಗ ಆಕೆಯ ವರ್ತನೆ ಅನುಮಾನ ತರಿಸಿದೆ. ಜುಲೈ 19ರಂದು ಭಾಗ್ಯಶ್ರೀ ಹಾಗೂ ದೀಪಕನ ವಿರುದ್ಧ ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.