ಸಾರಾಂಶ
ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರುಪಟ್ಟಣದ ಪ್ರಮುಖ ರಸ್ತೆಯಲ್ಲೇ ಅಂಚೆ ಇಲಾಖೆಗೆ ನಿವೇಶನ ಒದಗಿಸಿ ಹಲವು ವರ್ಷಗಳಾಗಿವೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ಇಲಾಖೆಗೆ ಸ್ವಂತ ಕಟ್ಟಡ ಒದಗಿಸುವತ್ತ ಈ ವರೆಗೂ ಚಿತ್ತ ಹರಿಸಿಲ್ಲ. ಕಚೇರಿಗೆ ಸುಸಜ್ಜಿತ ಕಟ್ಟಡ ಒದಗಿಸುವಂತೆ ಪಟ್ಟಣದ ಸಂಘ-ಸಂಸ್ಥೆಗಳು ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಪಟ್ಟಣದ ಹೃದಯ ಭಾಗದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ಅಂಚೆ ಕಚೇರಿ ನಿರ್ಮಿಸಲು ನಿಗದಿಪಡಿಸಿದ್ದು ಸದ್ಯ ಇದೀಗ ಈ ಜಾಗವು ಪಾಳು ಬಿದ್ದಿದ್ದು ಬಯಲು ಶೌಚದ ಸ್ಥಳವಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಗಳ ನಿರ್ಲಕ್ಷ್ಯದಿಂದಾಗಿ ಆ ಜಾಗದಲ್ಲಿ ಇಂದಿಗೂ ಅಂಚೆ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಿಲ್ಲ.
ಉತ್ತಮ ಸೇವೆ: ತಾಲೂಕಿನ ಹಳ್ಳಿಗಳ ಅಂಚೆ ಕಚೇರಿಗಳಿಗೆ ಪಟ್ಟಣದ ಅಂಚೆ ಕಚೇರಿ ಕೇಂದ್ರ ಆಧಾರಸ್ತಂಭದಂತಿದೆ. ಈ ಕೇಂದ್ರದಿಂದಲೇ ಹಳ್ಳಿಗಳ ಅಂಚೆ ಕಚೇರಿಗಳಿಗೆ ಕಾಗದಗಳ ಪಾರ್ಸಲ್ ರವಾನೆಯಾಗುತ್ತದೆ. ರಿಜಿಸ್ಟರ್, ಸ್ಪೀಡ್ ಪೋಸ್ಟ್‌ಗಳ ಸೇವೆ ಜತೆಗೆ ಉಳಿತಾಯ ಖಾತೆಗಳ ಸೇವೆಯೂ ಪಟ್ಟಣದ ಕಚೇರಿಯಲ್ಲಿ ಲಭ್ಯವಿದೆ. ಅಂಚೆ ಕಚೇರಿ ಬಸ್ ನಿಲ್ದಾಣದಿಂದ ದೂರ ಇರುವ ಕಾರಣ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾಸುರಕ್ಷಾ ಯೋಜನೆ, ವಿಶೇಷ ಚೇತನರ ವೇತನ, ರಿಜಿಸ್ಟರ್ ಪೋಸ್ಟ್, ಸ್ಪೀಡ್‌ಪೋಸ್ಟ್ ಅರ್ಜಿಗೆಂದು ಡಿಡಿ ಕಟ್ಟಲು ಮತ್ತಿತರ ಯೋಜನೆಗಳಿಗೆ ಅಂಚೆ ಇಲಾಖೆಯನ್ನು ಅವಲಂಬಿಸಿರುವ ಗ್ರಾಹಕರು ಹಾಗೂ ಹಿರಿಯ ನಾಗರಿಕರು ಅಂಚೆ ಕಚೇರಿಯನ್ನು ಹುಡುಕುವುದರಲ್ಲೇ ಬಸವಳಿಯುತ್ತಿದ್ದಾರೆ.ಅಭಿವೃದ್ಧಿಯಾಗುತ್ತಿರುವ ಪಟ್ಟಣಕ್ಕೆ ಅನುಗುಣವಾಗಿ ಕಚೇರಿ ಲಭ್ಯವಾಗದೆ ಲಭ್ಯ ವ್ಯವಸ್ಥೆಯಲ್ಲಿ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದೆ. ಸುಮಾರು ವರ್ಷಗಳಿಂದ ತಿಂಗಳಿಗೆ ₹೧೫೦೦೦ ಬಾಡಿಗೆ ನೀಡುತ್ತಿದ್ದು, ಈ ವರೆಗೂ ಕಚೇರಿಗೆ ನೀಡಲಾದ ಬಾಡಿಗೆ ಮೊತ್ತದಲ್ಲೇ ಸುಸಜ್ಜಿತ ಕಟ್ಟಡ ನಿರ್ಮಿಸುವಷ್ಟು ಮೊತ್ತ ಬಾಡಿಗೆ ರೂಪದಲ್ಲಿ ಪಾವತಿಯಾಗಿದೆ. ಅಂಚೆ ಇಲಾಖೆಗೆ ಸರ್ಕಾರದ ಸ್ವಂತ ಕಟ್ಟಡ ದೊರಕಿಸುವಲ್ಲಿ ವಿಫಲವಾಗಿದೆ. ಆದರೂ ಅಂಚೆ ಕಚೇರಿಗಳು ಗ್ರಾಹಕರಿಗೆ ಸದ್ದಿಲ್ಲದೆ ಸೇವೆಯನ್ನು ಕಲ್ಪಿಸುತ್ತಿದೆ.ಸಂಧ್ಯಾ ಸುರಕ್ಷಾ, ಪಿಂಚಣಿ ಸೇರಿದಂತೆ ಇತರ ಕಾರ್ಯಗಳಿಗಾಗಿ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ವಯೋವೃದ್ಧರು ಹೆಚ್ಚಾಗಿ ಅಂಚೆ ಕಚೇರಿಗೆ ಬರುತ್ತಾರೆ. ಆದರೆ ಕಚೇರಿ ಬಸ್ ನಿಲ್ದಾಣದಿಂದ ದೂರ ಇರುವುದರಿಂದ ಹೋಗಿ ಬರಲು ಸಮಸ್ಯೆಯಾಗುತ್ತಿದೆ. ಆಧುನಿಕ ಯುಗದಲ್ಲಿ ಅಂಚೆ ಕಚೇರಿಗಳ ಅವಶ್ಯಕತೆ ಜನಸಾಮಾನ್ಯರಿಗೆ ಕಡಿಮೆಯಾದರೂ ಸುಮಾರು ೧೫೦ ವರ್ಷ ಇತಿಹಾಸ ಉಳ್ಳ ಅಂಚೆ ಇಲಾಖೆಯ ನಿಯಮಗಳು ಬದಲಾಗಿಲ್ಲ. ಪಟ್ಟಣದ ಅಂಚೆ ಕಚೇರಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಸಾರ್ವಜನಿಕರಿಗೆ ತನ್ನದೇ ಆದ ಅಳಿಲು ಸೇವೆ ಸಲ್ಲಿಸುತ್ತಿರುವ ಅಂಚೆ ಕಚೇರಿಗೆ ಸ್ವಂತ ಕಟ್ಟಡ ದೊರಕಿಸಲು ಇಲಾಖೆಯ ಅಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಕಾಳಜಿ ತೋರಬೇಕಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಕಚೇರಿಗೆ ಶಾಶ್ವತ ಕಟ್ಟಡ ನೀಡಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕಿದೆ.ಪಟ್ಟಣದ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಾವೇರಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದ್ದು, ಸಂಸದರು ಶೀಘ್ರದಲ್ಲಿ ಕಟ್ಟಡ ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಅನುದಾನದ ಕೊರತೆಯಿಂದ ಕಟ್ಟಡ ನಿರ್ಮಾಣ ಮಾಡಲು ಆಗಿಲ್ಲ. ಹಿರೇಕೆರೂರು ಪಟ್ಟಣದಲ್ಲಿ ಅಂಚೆ ಕಚೇರಿಗೆ ಕಟ್ಟಡ ನಿರ್ಮಾಣಕ್ಕೆ ಹಲವಾರು ಬಾರಿ ಸಾರ್ವಜನಿಕರು ಮನವಿ ಮಾಡಿರುತ್ತಾರೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸದರ ಬಳಿ ಮಾತನಾಡಿ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಹಾವೇರಿ ಅಂಚೆ ಇಲಾಖೆ ಸಹಾಯಕ ಅಧೀಕ್ಷಕ ಅಶೋಕ ಆರ್. ಹೇಳಿದರು.