ಸಾರಾಂಶ
ಎಸ್.ಎಂ. ಸೈಯದ್ ಗಜೇಂದ್ರಗಡ
ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು, ಕೊನೆಯ ೧೪ ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೇರಲು ಬಿಜೆಪಿಯ ೩ ಸದಸ್ಯರು ಭರ್ಜರಿ ಕಸರತ್ತು ನಡೆಸಿದ್ದರೆ, ಇನ್ನುಳಿದ ೪ ಸದಸ್ಯರು ಅವಕಾಶ ಸಿಗಲಿ ಎಂದು ದೇವರ ಮೇಲೆ ಭಾರ ಹಾಕಿದ್ದಾರೆ. ಒತ್ತಡ ತಂತ್ರದ ಮೂಲಕ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿಗಿಳಿದಿದ್ದಾರೆ.ಪಟ್ಟಣದ ಪುರಸಭೆಗೆ ೨೩ ಸ್ಥಾನಗಳಿದ್ದು, ೧೮ ಬಿಜೆಪಿ ಹಾಗೂ ೫ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿ ಮೊದಲ ಹಂತದ ಅಧಿಕಾರ ಅವಧಿಗೆ ವೀರಪ್ಪ ಪಟ್ಟಣಶೆಟ್ಟಿ ಅಧ್ಯಕ್ಷರಾಗಿ, ಲೀಲಾವತಿ ವನ್ನಾಲ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಹೀಗಾಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ಆಕಾಂಕ್ಷಿಗಳಾಗಿದ್ದ ಕೆಲವು ಸದಸ್ಯರಿಗೆ ತೀವ್ರ ನಿರಾಸೆಯಾಗಿತ್ತು. ಮುಂದಿನ ಅವಧಿಗೆ ನಮ್ಮನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ಆಸೆ ಮೂಟೆಯನ್ನು ಕಟ್ಟಿಕೊಂಡು ಕಾಲ ದೂಡಿದ್ದ ಸದಸ್ಯರಿಗೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲು ಪ್ರಕಟವಾಗಿದೆ. ಹೀಗಾಗಿ ಪುರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಲು ಹಿರಿಯ ರಾಜಕಾರಣಿಗಳು, ಸಮಾಜದ ಮುಖಂಡರ ಮೂಲಕ ಹೈಕಮಾಂಡ್‌ನ ಗಮನ ಸೆಳೆಯಲು ಮುಂದಾಗಿದ್ದಾರೆ.
ಪಟ್ಟಣದ ಪುರಸಭೆಯ ಕೊನೆಯ ೧೪ ತಿಂಗಳ ಅವಧಿಗೆ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಮ್ಯಾಗೇರಿ, ಯಮನೂರ ತಿಕರೋಜಿ ಹಾಗೂ ಸುಜಾತಾಬಾಯಿ ಶೀಂಗ್ರಿ ಪ್ರಮುಖ ರೇಸ್‌ನಲ್ಲಿದ್ದಾರೆ. ಆದರೆ ವಿಜಯಾ ಮಳಗಿ, ಕೌಸರಬಾನು ಹುನಗುಂದ, ಉಮಾ ಮ್ಯಾಕಲ್, ದಾಕ್ಷಾಯಿಣಿ ಚೋಳಿನ ಸಹ ಆಕ್ಷಾಂಕ್ಷಿಗಳಾಗಿದ್ದಾರೆ. ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನದ ಆಸೆ ಹೊಂದಿಲ್ಲ ಎಂದು ಕಾಂಗ್ರೆಸ್ ಸದಸ್ಯರು ತಿಳಿಸುತ್ತಿದ್ದಾರೆ. ಆದರೆ ಕೆಲವು ಮುಖಂಡರು ಬಿಜೆಪಿಯ ಸದಸ್ಯರನ್ನು ಸಂಪರ್ಕಿಸಲು ಮುಂದಾಗಿದ್ದಾರೆ ಎಂಬ ಗುಸುಗುಸುಗಳು ಸಹ ಕೇಳಿ ಬರುತ್ತಿವೆ.ಅಧ್ಯಕ್ಷ ಸ್ಥಾನ ಸಾಮಾನ್ಯ
ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಎಂದು ಪ್ರಕಟವಾಗಿರುವ ಪರಿಣಾಮ ಬಿಜೆಪಿ ೧೮ ಸದಸ್ಯರಲ್ಲಿ ಹಿಂದಿನ ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಸ್ಥಾನ, ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೇರಿದ್ದ ೪ ಸದಸ್ಯರು ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ರೇಸ್‌ನಿಂದ್ ಹೊರಬಿದ್ದಿದ್ದಾರೆ ಎನ್ನವ ಚರ್ಚೆಗಳಿವೆ. ಹೀಗಾಗಿ ಇನ್ನುಳಿದ ೧೪ ಸದಸ್ಯರ ಪೈಕಿ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಇರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ೭ ಸದಸ್ಯರಿಗೆ ನೀಡುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ. ಪರಿಣಾಮ ಇನ್ನುಳಿದ ೭ ಸದಸ್ಯರಲ್ಲಿ ೩ ತೀವ್ರ ಪೈಪೋಟಿ ನಡೆಸಿದ್ದು, ರಾಜಕೀಯ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಹೈಕಮಾಂಡ್ ಕೃಪಾಕಟಾಕ್ಷವಿದ್ದರೆ ಮಾತ್ರ ಆಕಾಂಕ್ಷಿಗಳು ಹಾಕಿಕೊಂಡಿರುವ ಲೆಕ್ಕಾಚಾರವು ಸರಿಯಾಗುತ್ತದೆ ಇಲ್ಲದಿದ್ದರೆ ಎಲ್ಲವು ಅಯೋಮಯವಾಗಲಿವೆ.ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸುಭಾಸ ಮ್ಯಾಗೇರಿ ಹಾಗೂ ವೈ.ಬಿ. ತಿರಕೋಜಿ ತಿಳಿಸಿದ್ದಾರೆ.