ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕ ರಾಜು ಕಾಗೆ ಸ್ಪರ್ಧಿಸಲಿದ್ದು, ಈ ಹಿನ್ನೆಲೆ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಬಿಜೆಪಿ ಮುಖಂಡ ಹಾಗೂ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ದಿಲೀಪ ಪಾಟೀಲ ಭಾನುವಾರ ಶಾಸಕ ರಾಜು ಕಾಗೆ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು, ಸೊಸೈಟಿ ಠರಾವು ನೀಡಿ ಮಾವನಿಗೆ ಅಳಿಯ ನಿಷ್ಠೆ ತೋರುವ ಮೂಲಕ ಬೆಂಬಲ ಸೂಚಿಸಿದರು.ಈ ವೇಳೆ ಮಾತನಾಡಿದ ದಿಲೀಪ ಪಾಟೀಲ, ಉಗಾರ ಪಟ್ಟಣದಲ್ಲಿ ಶಾಸಕ ರಾಜು ಕಾಗೆ ನಮ್ಮ ಸಂಬಂಧಿಕರಾಗಿದ್ದು, ಕಳೆದ ಎರಡುವರೆ ವರ್ಷಗಳಲ್ಲಿ ಹಲವಾರು ಜನಪರ ಕಾರ್ಯಗಳನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಮಾಡಿದ್ದು, ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ಸ್ಪರ್ಧಿಸಲಿದ್ದಾರೆ. ಆದ್ದರಿಂದ ನಾನು ಬಿಜೆಪಿ ತೊರೆದು ಅವರ ಕಾರ್ಯವೈಖರಿ ಹಾಗೂ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ ಎಂದರು. ಪಾಟೀಲಗೆ ಶಾಸಕ ರಾಜು ಕಾಗೆ ಹೂಮಾಲೆ ಹಾಕುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡರು.
ಈ ವೇಳೆ ಪಿಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಜಗೌಡ ಪಾಟೀಲ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ಮುಖಮಡರಾದ ಬಾಳಾಸಾಬ ವಿಸಾಪುರೆ,ಸುರೇಶ ಕಟಗೇರಿ,ಸೇರಿದಂತೆ ಅನೇಕರು ಇದ್ದರು.ಶಾಸಕ ರಾಜು ಕಾಗೆ ನಮ್ಮ ಸಂಬಂಧಿಕರಾಗಿದ್ದು, ಕಳೆದ 30 ವರ್ಷಗಳಿಂದ ಒಳ್ಳೆಯ ಒಡನಾಟವನ್ನು ಹೊಂದಿದ್ದೇವೆ. ಇಬ್ಬರು ಒಂದೇ ಪಕ್ಷದಲ್ಲಿದ್ದೇವು. ಆದರೆ ಬದಲಾದ ಸನ್ನಿವೇಶದಲ್ಲಿ ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈಗ ಶಾಸಕರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಂಬಲ ಸೂಚಿಸಲು ನಾನು ಕಾಂಗ್ರೆಸ್ ಸೇರಿದ್ದೇನೆ. ದಿಲೀಪ ಪಾಟೀಲ, ನಿರ್ದೇಶಕ, ಮಂಗಾವತಿ ಪಿಕೆಪಿಎಸ್ ಸಂಘ