ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯಕ್ಸಂಬಾ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿಯು (ಬಹುರಾಜ್ಯ) ಪ್ರಸಕ್ತ ವರ್ಷದ ದಸರಾ- ದೀಪಾವಳಿ ಹಬ್ಬಕ್ಕೆ ಸಂಸ್ಥೆಯ ಎಲ್ಲ ಸದಸ್ಯರಿಗೆ ಶೇ.12 ಲಾಭಾಂಶ ಮತ್ತು ಸಿಬ್ಬಂದಿಗೆ ಶೇ.10 ಬೋನಸ್ ಹಾಗೂ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದಿಂದ ಸದಸ್ಯರಿಗೆ ಶೇ.10 ಲಾಭಾಂಶ ಮತ್ತು ಸಿಬ್ಬಂದಿಗೆ ಶೇ.8.33 ಬೋನಸ್ ನೀಡುವುದಾಗಿ ಸಂಸ್ಥೆ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಘೋಷಿಸಿದರು.ತಾಲೂಕಿನ ಯಕ್ಸಂಬಾ ಗ್ರಾಮದ ಬೀರೇಶ್ವರ ಮುಖ್ಯ ಕಚೇರಿಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿ ಕಠಿಣ ಪರಿಶ್ರಮದಿಂದ ಸಂಸ್ಥೆಯು ಪ್ರಗತಿಪಥದಲ್ಲಿ ಮುನ್ನಡೆದಿದೆ ಎಂದರು. ಸದಸ್ಯರಿಗೆ ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿರುವ ಶೇರ ಮೊತ್ತ ₹33.01.28.900 ಮೇಲೆ ಶೇ.12ರಷ್ಟ್ರು ಲಾಭಾಂಶ ಸದಸ್ಯರ ಖಾತೆಗಳಿಗೆ ಜಮೆ ಮಾಡಲಾಗಿದೆ. ಅದರಂತೆ ನೌಕರರ ಬೋನಸ್ ವಾರ್ಷಿಕ ಒಟ್ಟು ಸಂಬಳದ ಮೇಲೆ ₹3.26 ಕೋಟಿ ಮೇಲೆ ಶೇ.10 ರಷ್ಟು 1408 ಸಿಬ್ಬಂದಿಗೆ ಬೋನಸ್ ಜಮೆ ಮಾಡಲಾಗಿದೆ ಎಂದರು.
ಸಹಕಾರಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಸುಮಾರು 228 ಶಾಖೆಗಳಿದ್ದು, 4.22 ಲಕ್ಷ ಸದಸ್ಯರಿದ್ದು, ₹35.78 ಕೋಟಿ ಶೇರು ಬಂಡವಾಳದೊಂದಿಗೆ ₹4573 ಕೋಟಿ ಠೇವು ಹೊಂದಿದೆ. ₹237.59 ಕೋಟಿ ಕಾಯ್ದಿಟ್ಟ ಹಾಗೂ ಇತರ ನಿಧಿಗಳು, ₹3507.54 ಕೋಟಿ ಸಾಲ ಮತ್ತು ಮುಂಗಡಗಳು, ₹1133.67 ಕೋಟಿ ಬ್ಯಾಂಕ್ ಠೇವು-ಗುಂತಾವಣೆಗಳು, ₹5232.83 ಕೋಟಿ ದುಡಿಯುವ ಬಂಡವಾಳ ಹೊಂದಿ ಪ್ರಸಕ್ತ ವರ್ಷದಲ್ಲಿ ₹45.35 ಕೋಟಿ ನಿವ್ವಳ ಲಾಭಗಳಿಸಿದೆ ಎಂದರು.ಜ್ಯೋತಿ ಸಹಕಾರಿಯ ನಿರ್ದೇಶಕ ರಮೇಶ ಚೌಗಲೆ ಮಾತನಾಡಿ, ಸದಸ್ಯರಿಗೆ ಕಳೆದ ಸಾಲಿನ ₹2.03.57.700 ಶೇರು ಮೊತ್ತದ ಮೇಲೆ ಶೇ.10ರಷ್ಟು ಲಾಭಾಂಶವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ನೌಕರರಿಗೆ ಒಟ್ಟಾರೆ ₹48.06 ಲಕ್ಷ ಮೊತ್ತದ ಬೋನಸ್ ಬಿಡುಗಡೆ ಮಾಡಲಾಗಿದೆ. ಸಹಕಾರಿಯು ಒಟ್ಟು 46,744 ಸದಸ್ಯರನ್ನು ಹೊಂದಿದ್ದು, ₹2.54 ಕೋಟಿ ಶೇರು ಬಂಡವಾಳ, ₹354.43 ಕೋಟಿ ಠೇವು, ₹12.5 ಕೋಟಿ ಕಾಯ್ದಿಟ್ಟ ನಿಧಿ, ₹180.76 ಕೋಟಿ ಸಾಲ ಹಾಗೂ ಮುಂಗಡ, ₹128.84 ಕೋಟಿ ಬ್ಯಾಂಕ್ ಠೇವು ಮತ್ತು ಹೂಡಿಕೆ, ₹371.13 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು. ಅಲ್ಲದೆ, ಪ್ರಸಕ್ತ ವರ್ಷದಲ್ಲಿ ₹7.50 ಕೋಟಿ ಖರೀದಿ ಹಾಗೂ ₹8.48 ಕೋಟಿ ಮಾರಾಟ ನಡೆಸಿದ್ದು, ಒಟ್ಟಾರೆ ₹1.72 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.
ಬೀರೇಶ್ವರ ಉಪಾಧ್ಯಕ್ಷ ಆನಂದ ಪಾಟೀಲ, ಜ್ಯೋತಿ ಸಹಕಾರಿಯ ಅಧ್ಯಕ್ಷ ಬಾಬುರಾವ ಮಾಳಿ, ಉಪಾಧ್ಯಕ್ಷ ವಿಶ್ವನಾಥ ಪೇಟಕರ ಸೇರಿದಂತೆ ಎಲ್ಲ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ.ಮಂಗಾವತೆ, ಶಿವು ಡಬ್ಬನ್ನವರ, ಎಸ್.ಕೆ.ಮಾನೆ ಹಾಗೂ ಜ್ಯೋತಿ ಸಹಕಾರಿ ಪ್ರಧಾನ ವ್ಯವಸ್ಥಾಪಕ ಸಂತೋಚ ಪಾಟೀಲ, ಇದ್ದರು.