ಸಾರಾಂಶ
ಶಿಕಾರಿಪುರ: ಸಂಸದರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಗುವಳಿದಾರರ ಬಗ್ಗೆ ಕನಿಕರ ವ್ಯಕ್ತಪಡಿಸುವ ಛಾಳಿ ಹೆಚ್ಚಾಗಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿದಾಗ ಕನಿಷ್ಠ ಲೋಕಸಭೆಯಲ್ಲಿ ವಿಷಯ ಪ್ರಸ್ಥಾಪಿಸದ ಸಂಸದರು ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಮುದಿಗೌಡರ ಕೇರಿಯಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 3-4 ದಶಕದ ಹಿಂದೆ ಸಣ್ಣಪುಟ್ಟ ಜಲಾಶಯದ ನೀರನ್ನು ಅವಲಂಭಿಸಿದ್ದ ರೈತರು ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಉಚಿತ ವಿದ್ಯುತ್ ಯೋಜನೆಯಿಂದಾಗಿ ಇದೀಗ ಹೊಲ, ಗದ್ದೆ, ತೋಟಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅವರ ಹೆಸರಿನಲ್ಲಿ ರೈತರು ನಿತ್ಯ ಊಟ ಮಾಡುವಂತಾಗಿದೆ ಎಂದು ತಿಳಿಸಿದರು. ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಆಸ್ತಿ ಸಂಪಾದನೆಗೆ ಆಸಕ್ತಿ ತೋರಲಿಲ್ಲ. ಜನಸಾಮಾನ್ಯರ ಸಂಕಷ್ಟವನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಕೇವಲ 30-40 ಸ್ಥಾನಕ್ಕೆ ಸೀಮಿತವಾಗಿದ್ದ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅಧಿಕಾರದ ಬಾಗಿಲು ತೆರೆದು 75 ಅಧಿಕ ಸ್ಥಾನದ ಜತೆಗೆ ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿಯಾಗಲು ಮೆಟ್ಟಿಲು ಆದ ವ್ಯಕ್ತಿ. ಅವರ ಕುಟುಂಬದ ಬಗ್ಗೆ ಮಾತನಾಡುವ ಮುನ್ನಾ ಯೋಚಿಸುವಂತೆ ಎಚ್ಚರಿಸಿದ ಅವರು, ಬಂಗಾರಪ್ಪನವರ ಭಿಕ್ಷೆಯಿಂದಾಗಿ ಸತತ ಶಾಸಕರಾಗಿದ್ದ ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿದ್ದನ್ನು ಮರೆಯದಂತೆ ತಿಳಿಸಿದರು. ಬಂಗಾರಪ್ಪ ಅವರು ನಿರುದ್ಯೋಗಿಗಳಿಗೆ ಉದ್ಯೋಗ, ರೈತರಿಗೆ ಸ್ವಂತ ಬಲದಲ್ಲಿ ನಿಲ್ಲಲು ಶಕ್ತಿ ತುಂಬವ ಕಾರ್ಯ ಮಾಡಿದ್ದಾರೆ. ಸಾಗುವಳಿದಾರರ ಹೋರಾಟದ ಮೂಲಕ ಅಧಿಕಾರ ಗಳಿಸಿದ ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಗಳಿಸಿದ ಸಂದರ್ಭದಲ್ಲಿ ಬಗರ್ ಹುಕುಂ ಕಾನೂನು ಸರಳೀಕರಣಗೊಳಿಸುವ ವಾಗ್ದಾನ ಮರೆತು ಹಕ್ಕುಪತ್ರ ನೀಡುವ ಪ್ರಯತ್ನ ಮಾಡದೆ ಗ್ರಾಮ ಠಾಣಾ ರೈತರ ಜಮೀನು ಇಂಡೀಕರಣಗೊಳಿಸಿ ಮನೆ ತೆರವು, ಒಕ್ಕಲೆಬ್ಬಿಸಲು ಲಕ್ಷಾಂತರ ರೈತರಿಗೆ ನೋಟಿಸ್ ನೀಡಿದ್ದು, ಈ ಬಗ್ಗೆ ಸೂಕ್ತ ದಾಖಲೆ ನೀಡುವುದಾಗಿ ಅವರು ತಿಳಿಸಿದರು. ಗ್ರಾ.ಪಂ, ತಾ.ಪಂ, ಜಿ.ಪಂ,ಪುರಸಭೆ ಮತ್ತಿತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಂಸದರಿಗೆ ಏಕಾಏಕಿ ರೈತರ ಬಗ್ಗೆ ಕನಿಕರ ಉಕ್ಕಿ ಕಾಂಗ್ರೆಸ್‌ನವರು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವೃಥಾ ಆರೋಪ ಮಾಡುತ್ತಿದ್ದು ಇಂತಹ ಕೆಟ್ಟ ಛಾಳಿ ಬಿಡುವಂತೆ ಹೇಳಿದ ಅವರು, ಸಚಿವ ಮಧು ರವರ ಪ್ರಯತ್ನದ ಫಲವಾಗಿ ಬಿಜೆಪಿ ಸರ್ಕಾರದಲ್ಲಿನ ಮುಂಗಡ ಕಾಮಗಾರಿಗೆ ಗುತ್ತಿಗೆದಾರರಿಗೆ ಇದೀಗ ಹಂತಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಟೆಂಡರ್ ಪ್ರಕಟಣೆ ಮತ್ತಿತರ ಅನುಮೋದನೆ ದೊರೆತಿದ್ದು, ಈ ಬಗ್ಗೆ ಸೂಕ್ತ ದಾಖಲೆ ಹೊಂದಿದ್ದು ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡದಂತೆ ಸಲಹೆ ನೀಡಿದರು. ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳದ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಸುರೇಶ್ ಧಾರವಾಡದ, ವಿಜಯಕುಮಾರ್, ಗ್ರಾ.ಪಂ ಸದಸ್ಯ ಕುಮಾರನಾಯ್ಕ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಸುರೇಶ್, ಪಕ್ಷದ ತಾ.ಪ್ರ.ಕಾ ಕೃಷ್ಣೋಜಿರಾವ್ ಕೊಟ್ಟ ಮತ್ತಿತರರು ಉಪಸ್ಥಿತರಿದ್ದರು.