ಕುಲಾಂತರಿ ಬೀಜ ತಳಿಯಿಂದ ಅನಾಹುತ

| Published : Oct 01 2024, 01:19 AM IST

ಸಾರಾಂಶ

ತುಮಕೂರು: 116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮ ದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂ ಅನಾಹುತವೇ ಸಂಭವಿಸಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ. ಗಂಗಾಧರ್‌ ಕರೆ ಕಳವಳಿಸಿದರು.

ತುಮಕೂರು: 116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮ ದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂ ಅನಾಹುತವೇ ಸಂಭವಿಸಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ. ಗಂಗಾಧರ್‌ ಕರೆ ಕಳವಳಿಸಿದರು. ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ಕೇಂದ್ರ ಸರ್ಕಾರದ ಕುಲಾಂತರಿ ಬೀಜ ರಾಷ್ಟ್ರೀಯ ನೀತಿ ವಿರೋಧಿಸಿ ಹಮ್ಮಿಕೊಂಡಿರುವ ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಮಾತನಾಡಿದರು. ದೇಶಿ ಬೆಳೆಗಳನ್ನು ನಾಶ ಮಾಡಿ ಕುಲಾಂತರಿ ವ್ಯವಸ್ಥೆ ತರುವ ಮೂಲಕ ನಮ್ಮ ಕೃಷಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಯೋಜನೆಯೇ ರೂಪಿಸಿವೆ. ಅನ್ನ ಹಾಕುವ ರೈತರನ್ನು ಗ್ರಾಹಕರನ್ನಾಗಿ ಮಾರ್ಪಾಡು ಮಾಡುವ ದೊಡ್ಡ ಸಂಚು ನಡೆದಿದೆ ಎಂದು ಅವರು ವಿವರಿಸಿದರು.ಹಸಿರು ಕ್ರಾಂತಿಯಿಂದಾದ ಹಾನಿಯಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈಗ 3ನೇ ಕೃಷಿ ಕ್ರಾಂತಿ ತರಲು ಹೊಂಚು ಹಾಕುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ನಮ್ಮ ಧ್ವನಿ ಹಾಗೂ ಪ್ರತಿಭಟನೆಗಳ ಸಾಮರ್ಥ್ಯ ಹೆಚ್ಚಾದರೆ ಸಂವಿಧಾನಾತ್ಮಕವಾಗಿಯೂ ಮಹತ್ವ ದೊರೆಯಲಿದ್ದು, ಸರ್ಕಾರಗಳಿಗೆ ಚಳವಳಿಗಳ ಮೂಲಕವೇ ಅರ್ಥ ಮಾಡಿಸೋಣ ಎಂದು ನಿರ್ಧಾರ ಕೈಗೊಂಡರು.ರೈತ ಸಂಘದ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರಿ ವಿಜ್ಞಾನಿಗಳು ಮಾರಾಟವಾಗಿದ್ದಾರೆ. ವೈದ್ಯರು ವ್ಯಾಪಾರಿಗಳಾಗಿದ್ದಾರೆ. ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರವೇ ಹಣ ಗಳಿಕೆಗೆ ಮೀಸಲಾಗಿದೆ. ಹಳಿತಪ್ಪಿರುವ ವ್ಯವಸ್ಥೆ ಸರಿಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭೂಮಿಗೂ ನಮಗೂ ಭಾವನಾತ್ಮಕ ಸಂಬಂಧವಿದ್ದು, ಕೃಷಿ ಸಂಸ್ಕೃತಿ ಆಧಾರಿತ ಉದ್ಯೋಗ ತಂದುಕೊಟ್ಟಿದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ಭೂಮಿಯನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹ ದಾಖಲೆಯಾಗಿ ಉಳಿಯಲಿದೆ ಎಂದರು.ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಎಸ್.ಎನ್ ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಹೋರಾಟಗಾರರಾದ ಶಾಂತಕೃಷ್ಣ, ತನುಜ, ನೇತ್ರಾವತಿ, ಶಾರದಾ, ಬಿ.ಮರುಳಯ್ಯ, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಪರಿಸರವಾದಿ ಸಿ.ಯತಿರಾಜು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಾಜರಿದ್ದರು.