ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಬಿಸಿಲ ಸೀಮೆ, ಬರದ ನಾಡು ಎಂದೇ ಪ್ರಸಿದ್ದವಾಗಿರುವ ಕೋಲಾರ ಜಿಲ್ಲೆ ಈ ವರ್ಷವೂ ಆ ಹೆಸರನ್ನು ಉಳಿಸಿಕೊಳ್ಳುವ ಸೂಚನೆಗಳು ಕಂಡುಬರುತ್ತಿವೆ. ಪ್ರಾರಂಭದಲ್ಲಿ ಆಸೆ ಉಂಟುವಂತೆ ಪ್ರಾರಂಭವಾದ ಮುಂಗಾರು ಮಳೆ ಹಿಂದಿನಂತೆಯೇ ಈ ಬಾರಿಯೂ ಆಸೆಗೆ ಬೆಂಕಿ ಹಚ್ಚಿಹೋಗಿದೆ. ರೈತರ ನಿರೀಕ್ಷೆಗಳು ಹಿಂದುಮುಂದಾಗಿ ಚಿಂತೆ ಕಾಡತೊಡಗಿದೆ.ಈ ಸಾಲಿನ ಕೃಷಿ ಹಂಗಾಮಿನಲ್ಲಿ ಉಳಿಮೆ ಮತ್ತು ಬಿತ್ತನೆಯಾದುದು ಕಡಿಮೆ, ಬಿತ್ತನೆಯಾದಷ್ಟು ಬೆಳೆ ಈಗ ಬಿಸಿಲಲ್ಲಿ ಸುಡತೊಡಗಿದೆ. ಒಣಗುತ್ತಿರುವ ರಾಗಿ ಪೈರು ಮುಂದಿನ ದಿನಗಳಲ್ಲಿ ಗಂಜಿಗೂ ಬರ ಎಂಬುದನ್ನು ಹೇಳುತ್ತಿರುವಂತಿದೆ. ಸಾಲುಗಳ ಮಧ್ಯದಲ್ಲಿ ಮೊಳಕೆಯಿಟ್ಟ ಮೇವಿನ ಜೋಳದ ಪೈರು ಒಣಗುತ್ತಿದ್ದು, ಧನಕರುಗಳ ಮೇವಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಅವರೇ ಬೆಳೆ ಬಿಸಿಲಿಗೆ ಬಾಡುತ್ತಿದ್ದು ರೈತರನ್ನು ಕಂಗೆಡಿಸಿದೆ.
ಜಿಲ್ಲೆಯಲ್ಲಿ ಮಳೆಯ ಕೊರತೆಮಳೆ ಮತ್ತು ಮಂಜನ್ನು ಆಧರಿಸಿದ ಬೆಳೆ ಹುರಳಿ, ಈಗ ಕೋಲಾರ ಜಿಲ್ಲೆಯ ಆಕಾಶದಲ್ಲಿ ಮಳೆ ಬರುವಂತೆ ಮೋಡಗಳು ಕಾಣಿಸಿಕೊಳ್ಳುತ್ತಿದ್ದರೂ ಮಳೆ ಬರುತ್ತಿಲ್ಲ, ಕೆಲವು ಕಡೆ ಮಳೆ ಬಂದರೂ ಗುಬ್ಬಿ ಪುಕ್ಕ ನೆನೆಯುವಷ್ಟರಲ್ಲಿ ನಿಂತು ಹೋಗುತ್ತಿರುವುದರಿಂದ ಉಪಯೋಗವಿಲ್ಲದ್ದಂತಾಗಿದೆ. ಕನಿಷ್ಟ ಭೂಮಿ ನೆನೆಯುಷ್ಟಾದರೂ ಮಳೆಯಾದರೆ ಹಿಂಗಾರಿನ ಬೆಳೆಗಳಿಗೆ ಅನುಕೂಲವಾದೀತು ಎಂಬ ನಿರೀಕ್ಷೆ ಜಿಲ್ಲೆಯ ರೈತರದ್ದಾಗಿದೆ.ಈಗಲೂ ಒಂದಷ್ಟು ಮಳೆಯಾದರೆ ಒಣಗಿಹೋದ ಪೈರುಗಳನ್ನುಬಿಟ್ಟು ಬಾಡುತ್ತಿರುವ ಪೈರುಗಳಿಗೆ ಜೀವ ಬಂದೀತು, ಒಂದಷ್ಟು ಕಾಳು ಕಡಿ, ಜಾನುವಾರುಗಳಿಗೆ ಅಲ್ಪಪ್ರಮಾಣದ ಮೇವು ಸಿಕ್ಕೀತು ಎನ್ನುವ ಆಶಾಭಾವನೆ ರೈತರಲ್ಲಿದೆ.ಮಳೆ ಬಂದರೆ ನೆಲಗಡಲೆಗೆ ಜೀವ
ಜಿಲ್ಲೆಯ ಉತ್ತರ ಭಾಗದ ಗಡಿಪ್ರದೇಶದಲ್ಲಿ ನೆಲೆಗಡಲೆ ಸಾಮಾನ್ಯ ಬೆಳೆ ಈಗ ಅದಕ್ಕೆ ನೀರಿನ ಅಗತ್ಯ ಬಹಳವಾಗಿದೆ, ಮಳೆದೇವನಿಗೆ ಕರುಣೆ ಬಂದರೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ. ಜಿಲ್ಲೆಯ ಹವಾಮಾನ ನಡು ಬೇಸಿಗೆಯ ಹವಾಮಾನದ್ದಂತಿದೆ. ಮಳೆಗಾಲದಲ್ಲಿ ಕಂಡುಬರುವ ತಂಪಿಹವೆ ಇಲ್ಲವಾಗಿದ್ದು ಜನರನ್ನು ಧಣಿಸುತ್ತಿದೆ. ಇದರ ಪರಿಣಾಮವಾಗಿ ಟೊಮೆಟೋ ಸೇರಿದಂತೆ ಹೂವು, ತರಕಾರಿ ಬೆಳೆಗಳ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.ಒಂದೆರಡು ತಿಂಗಳಲ್ಲಿ ನೀರಿಗೂ ಬರ
ಜಿಲ್ಲೆಯ ಹವಾಮಾನ ಕೃಷಿ ವಾತಾವರಣವನ್ನು ಸಧ್ಯದಲ್ಲಿರುವಂತೆ ವಿಶ್ಲೇಷಿಸುವುದಾದರೆ ಈ ವರ್ಷದ ಡಿಸೆಂಬರ್ ಅಂತ್ಯದ ಒಳಗೆ ಜಾನುವಾರುಗಳಿಗೆ ಮೇವು, ಗ್ರಾಮ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ದುಡಿಮೆಗೆ ಕೆಲಸಗಳ ಕೊರತೆ ಉಂಟಾಗುವ ಸಾಧ್ಯತೆಗಳಿವೆ.