ಸಾರಾಂಶ
ಸರ್ಕಾರದಿಂದ ಸರಬರಾಜಾಗಿರುವ ಅಕ್ಕಿ ಮತ್ತು ಗೋಧಿಯಲ್ಲಿ ಅವ್ಯವಹಾರ ನಡೆದಿದೆ. ಇಲ್ಲಿನ ಅಧಿಕಾರಿಗಳು ಹಾಗೂ ನೌಕರರು ಭಾಗಿಯಾಗಿರುವ ಸಾಧ್ಯತೆ ಇದೆ. ಅಲ್ಲದೇ ಪೂರೈಕೆಯಾಗುವ ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವ್ಯಾಪ್ತಿಯ ಎಂಎಸ್ ಪಿಪಿಸಿಯಲ್ಲಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.ತಾಲೂಕು ಕಚೇರಿ ಬಳಿ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಇ.ಅಪ್ಪೇಗೌಡ ನೇತೃತ್ವದಲ್ಲಿ ಶಿರಸ್ತೇದಾರ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿ, ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಹಸೀಲ್ದಾರ್ ತನಿಖೆ ನಡೆಸುವಂತೆ ಆಗ್ರಹಿಸಿದರು.
ಅಧ್ಯಕ್ಷ ಎಚ್.ಇ.ಅಪ್ಪೇಗೌಡ ಮಾತನಾಡಿ, ಸರ್ಕಾರದಿಂದ ಸರಬರಾಜಾಗಿರುವ ಅಕ್ಕಿ ಮತ್ತು ಗೋಧಿಯಲ್ಲಿ ಅವ್ಯವಹಾರ ನಡೆದಿದೆ. ಇಲ್ಲಿನ ಅಧಿಕಾರಿಗಳು ಹಾಗೂ ನೌಕರರು ಭಾಗಿಯಾಗಿರುವ ಸಾಧ್ಯತೆ ಇದೆ. ಅಲ್ಲದೇ ಪೂರೈಕೆಯಾಗುವ ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಳವಳ್ಳಿಯಲ್ಲಿನ ತಯಾರಿಕ ಕೇಂದ್ರದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಆಹಾರವನ್ನು ಸ್ವಚ್ಛಗೊಳಿಸಿಲ್ಲ. ಅಲ್ಲದೇ ಪ್ಯಾಕೆಟ್ ಗಳಲ್ಲಿನ ತೂಕದ ಪ್ರಮಾಣದಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ಆರೋಪಿಸಿದರು.
ನೌಕರರು ಚೀಲದಲ್ಲಿ ಪದಾರ್ಥಗಳನ್ನು ತುಂಬಿಕೊಂಡು ಹೋಗುತ್ತಾರೆ. ಈ ಬಗ್ಗೆ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ಅವ್ಯವಹಾರದಲ್ಲಿ ಎಂಎಸ್ಪಿಪಿಸಿ ಕೇಂದ್ರದವರು ಹಾಗೂ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ, ಹಲಗೂರು ಹೋಬಳಿ ಅಧ್ಯಕ್ಷ ಗಂಗರಾಜು, ಮುಖಂಡರಾದ ಎಂ.ನಿಂಗಚಾರಿ, ನಾಗರಾಜು, ಸಿದ್ದಯ್ಯ, ಶಿವ, ಸಚಿನ್, ಪ್ರವೀಣ್, ಕೆಂಪೇಗೌಡ ಇದ್ದರು.