ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ವಿವಾದ ಬಗೆಹರಿಸಲು ಮಧ್ಯರಾತ್ರಿವರೆಗೂ ನಡೆಸಿದ ನಿರಂತರ ಪ್ರಯತ್ನ ಯಶಸ್ವಿಯಾಗಿದ್ದು, ಎರಡೂ ಕಡೆಯವರು ಸಹಮತದ ಮೂಲಕ ಸಮಸ್ಯೆಗೆ ಅಂತ್ಯ ಹಾಡಲು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.ನಗರದ ಸರ್ಕಿಟ್ ಹೌಸ್ನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಿದ ಬಳಿಕ, ಅದರ ಆಧಾರದ ಮೇಲೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ದರ ನಿರ್ಧರಿಸಲು ಒಪ್ಪಂದದ ಸೂತ್ರ ರೂಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ರೈತರು ಹಾಗೂ ಕಾರ್ಖಾನೆ ಮಾಲೀಕರು ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.
ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಹಾಗೂ ಕಬ್ಬಿನ ಬೆಲೆ ನಿಗದಿಯಲ್ಲಿ ಉಂಟಾಗಿರುವ ಸಮಸ್ಯೆಯೇ ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈತರ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದು, ಬೆಲೆ ನಿಗದಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೇಂದ್ರ ನಿಗದಿಪಡಿಸುವ ಬೆಲೆಗೆ ರೈತರು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.ಗ್ರಾಹಕರಿಗೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಪ್ರತ್ಯೇಕ ಸಕ್ಕರೆ ಬೆಲೆ ನಿಗದಿ ಮಾಡುವ ಕುರಿತ ರೈತರ ಬೇಡಿಕೆಯನ್ನೂ ಕೇಂದ್ರದ ಗಮನಕ್ಕೆ ತರಲಾಗುವುದು. ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರವೂ ಒತ್ತಡ ಹೇರಲಿದೆ. ರೈತರು ಹಾಗೂ ಸಕ್ಕರೆ ಕಾರ್ಖಾನೆಗಳು ಪರಸ್ಪರ ಅವಲಂಬಿತವಾಗಿವೆ. ಕಾರ್ಖಾನೆಗಳಿದ್ದರೆ ರೈತರಿಗೆ ಅನುಕೂಲ, ರೈತರಿದ್ದರೆ ಕಾರ್ಖಾನೆಗಳಿಗೆ ಕಚ್ಚಾ ವಸ್ತು ದೊರೆಯುತ್ತದೆ. ಹೀಗಾಗಿ ಎರಡೂ ಉಳಿಯಬೇಕು. ಕಾರ್ಖಾನೆ ಮಾಲೀಕರು ಸಾಲದ ಹೊರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕೆಲವು ಕಾರ್ಖಾನೆಗಳನ್ನು ಸರ್ಕಾರವೇ ವಹಿಸಿಕೊಂಡು ನಡೆಸುವಂತೆ ಮಾಲೀಕರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಕಬ್ಬು ಅರೆಯುವಿಕೆ ಇನ್ನೂ ಆರಂಭವಾಗದಿರುವುದರಿಂದ ರೈತರಿಗೆ ಕಬ್ಬು ಒಣಗುವ ಆತಂಕವಿದೆ. ಇನ್ನೊಂದು ವಾರ ವಿಳಂಬವಾದರೂ ರೈತರಿಗೆ ದೊಡ್ಡ ನಷ್ಟವಾಗಲಿದೆ. ಕಾರ್ಖಾನೆಗಳಿಗೂ ಬಡ್ಡಿಯ ಹೊರೆ ಹೆಚ್ಚಾಗಲಿದೆ. ಆದ್ದರಿಂದ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದು ಅನಿವಾರ್ಯವಾಗಿತ್ತು ಎಂದರು.
ರೈತರು ದೇಶದ ದೊಡ್ಡ ಆಸ್ತಿ. ಅವರನ್ನು ಬದುಕಿಸುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ ರೈತರ ಪರವಾಗಿ ನಿಂತು ಕೇಂದ್ರದ ಮೇಲೆ ಒತ್ತಡ ಹೇರಲಿದೆ. ಸರ್ಕಾರದಿಂದ ನೇರವಾಗಿ ಹೆಚ್ಚುವರಿ ನೆರವು ನೀಡುವುದು ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟವಾದರೂ, ರೈತರ ಹಿತ ಕಾಪಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ವಿವರಿಸಿದರು.
ಸರ್ಕಾರ ಈಗಾಗಲೇ ಜನಕಲ್ಯಾಣ ಯೋಜನೆಗಳಿಗೆ ವಾರ್ಷಿಕ ಒಂದು ಲಕ್ಷ ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ. ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳ ಹೊರೆ ರಾಜ್ಯದ ಮೇಲಿದೆ. ಹೀಗಾಗಿ ಕೇಂದ್ರದ ನೆರವು ಹಾಗೂ ಬೆಲೆ ನಿಗದಿ ಪ್ರಮುಖವಾಗಿದೆ. ಸಹಮತದ ಮೂಲಕ ಸಮಸ್ಯೆ ಬಗೆಹರಿಸಲು ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದು, ಬಂದ್ಗೆ ನೀಡಿದ್ದ ಕರೆಯನ್ನು ರೈತ ಮುಖಂಡರು ಹಿಂಪಡೆದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಅವರು ಹೇಳಿದರು.ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಶಾಸಕರು, ರೈತ ಮುಖಂಡರು, ಕಾರ್ಖಾನೆ ಪ್ರತಿನಿಧಿಗಳು, ಸಂಸದರು ಹಾಗೂ ಅಧಿಕಾರಿಗಳು ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರ ಸಹಕಾರದಿಂದ ಸಮಸ್ಯೆ ಸುಖಾಂತ್ಯದತ್ತ ಸಾಗಿದೆ ಎಂದರು. ಡಿಸೆಂಬರ್ನಲ್ಲಿ ಅಧಿವೇಶನ
ಬೆಳಗಾವಿಯಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಚುನಾವಣಾ ನೀತಿ ಸಂಹಿತೆ ಸೇರಿದಂತೆ ಯಾವುದೇ ಅಡಚಣೆಗಳಿದ್ದರೂ ಅಧಿವೇಶನ ನಡೆಸುವ ಸಂಬಂಧ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.