ಮಂಗಳೂರು: ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ನೀಡಲಾಗುವ ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿವರೆಗೂ ಪ್ರಶಸ್ತಿ ಪುರಸ್ಕೃತ ಪಟ್ಟಿಯ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. ಕೊನೆಗೆ ಮರುದಿನ ರಾಜ್ಯೋತ್ಸವ ಆಚರಣೆ ವೇಳೆಯೇ ಪಟ್ಟಿಯನ್ನು ಪ್ರಕಟಿಸಿದ ವಿದ್ಯಮಾನಕ್ಕೆ ಸಾಕ್ಷಿಯಾಗಬೇಕಾಯಿತು.

ಪ್ರತೀ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯೋತ್ಸವದ ಹಿಂದಿನ ದಿನ ದ.ಕ. ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸುತ್ತಿತ್ತು, ಜೊತೆಗೆ ಮಾಧ್ಯಮದವರಿಗೂ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರಶಸ್ತಿ ಪುರಸ್ಕೃತರ ಅಧಿಕೃತ ಪಟ್ಟಿ ತಡರಾತ್ರಿವರೆಗೂ ಮಾಧ್ಯಮದವರಿಗೆ ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಸಮಾರಂಭ ನಡೆಯುವ ಸಂದರ್ಭದಲ್ಲೇ ಮಾಧ್ಯಮದರಿಗೆ ಅಧಿಕೃತ ಪಟ್ಟಿ ಲಭ್ಯವಾಗಿತ್ತು.ಲಾಬಿಯಿಂದ ಬೆಳೆದ ಪಟ್ಟಿ?:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಬೇಕು. ಅದರಂತೆ ಅರ್ಜಿ ಹಾಕಿದವರನ್ನು ಹಾಗೂ ಸಾಧನೆ ಮಾಡಿದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ನಡುವೆ ಪ್ರತಿ ಬಾರಿಯೂ ಪ್ರಶಸ್ತಿ ಆಯ್ಕೆ ವೇಳೆ ರಾಜಕೀಯ ಮಧ್ಯಪ್ರವೇಶ, ಒತ್ತಡಗಳು ಇರುತ್ತವೆ ಎಂಬ ಆರೋಪಗಳು ವ್ಯಕ್ತವಾಗಿದೆ. ಈ ಬಾರಿ ಮೊದಲು ಹರಿದಾಡಿದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 96 ವ್ಯಕ್ತಿಗಳಿಗೆ ಹಾಗೂ 48 ಸಂಘ-ಸಂಸ್ಥೆಗಳು ಸೇರಿದ್ದವು. ತಡರಾತ್ರಿವರೆಗೆ ನಡೆದ ಬೆಳವಣಿಗೆಯ ಬಳಿಕ ಮರುದಿನ ಬೆಳಗ್ಗೆ ಸಮಾರಂಭದಲ್ಲಿ ಮಾಧ್ಯಮಕ್ಕೆ ಬಿಡುಗಡೆಗೊಂಡಿದ್ದ ಅಧಿಕೃತ ಪಟ್ಟಿಯಲ್ಲಿ 119 ವ್ಯಕ್ತಿಗಳಿಗೆ ಹಾಗೂ 54 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ ಆಗಿತ್ತು. ರಾಜ್ಯೋತ್ಸವ ದಿನದಂದೇ ಅದರಲ್ಲೂ ಸಮಾರಂಭದಲ್ಲೇ ಪ್ರಶಸ್ತಿ ವಿಜೇತರ ಅಧಿಕೃತ ಪಟ್ಟಿ ಬಿಡುಗಡೆಗೊಂಡಿರುವುದು ಇದೇ ಮೊದಲು. ---