ಪುತ್ತೂರು: ಪುತ್ತೂರಿನ ಚಿನ್ನಾಭರಣ ವ್ಯಾಪಾರದಲ್ಲಿ ಶತಮಾನದ ಪರಂಪರೆ ಹಾಗೂ ತಲೆಮಾರುಗಳ ವಿಶ್ವಾಸದೊಂದಿಗೆ ಗುರುತಿಸಿಕೊಂಡಿರುವ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಯ ಶತಮಾನೋತ್ಸವದ ವಿಶೇಷ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಮಹಾರಾಷ್ಟ್ರದ ಮಂಗೇಲಿಯ ಡಿವೈನ್ ಸೋಲ್ ಚಾರಿಟೇಬಲ್ ಟ್ರಸ್ಟ್‌ನ ಸ್ವಾಮೀಜಿ ದಕ್ಷ ರಾಜ್ ಸರಸ್ವತಿ ಹಾಗೂ ಸಂಸ್ಥೆಯ ಪರಂಪರೆಯನ್ನು ಮುನ್ನಡೆಸಿದ ಗೋವಿಂದ ಭಟ್ ಅವರು ಶತಮಾನೋತ್ಸವದ ವಿಶೇಷ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗೋವಿಂದ ಭಟ್ ಅವರ ಪತ್ನಿ ಶಾರದಾ ಡಿ.ಜಿ. ಹಾಗೂ ಸಂಸ್ಥೆಯನ್ನು ಪ್ರಸ್ತುತ ಮುನ್ನಡೆಸುತ್ತಿರುವ ಈಶ್ವರ ಮುರಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ವಾಮೀಜಿ ದಕ್ಷ ರಾಜ್ ಸರಸ್ವತಿ ಅವರು, ವ್ಯಾಪಾರದಲ್ಲಿ ನೂರು ವರ್ಷಗಳ ಪಯಣವನ್ನು ಪೂರ್ಣಗೊಳಿಸುವುದು ಮಹತ್ವದ ಸಾಧನೆಯಾಗಿದ್ದು, ಅದರ ಹಿಂದೆ ಪ್ರಾಮಾಣಿಕತೆ, ಪರಿಶ್ರಮ ಮತ್ತು ಗ್ರಾಹಕರ ವಿಶ್ವಾಸವಿರುತ್ತದೆ. ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ವಿಶ್ವಾಸವೇ ಯಾವುದೇ ಸಂಸ್ಥೆಯ ನಿಜವಾದ ಸಂಪತ್ತು. ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿ ಹೊಂದಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಆಶೀರ್ವದಿಸಿದರು.

ಮೂರು ತಲೆಮಾರುಗಳ ಚಿನ್ನದ ಪರಂಪರೆ: 1927ರಲ್ಲಿ ಡಿ. ಶಿವ ಭಟ್ ಅವರು ಸ್ಥಾಪಿಸಿದ ಚಿನ್ನಾಭರಣ ಸಂಸ್ಥೆಯನ್ನು ಎರಡನೇ ತಲೆಮಾರಿನಲ್ಲಿ ಗೋವಿಂದ ಭಟ್ ಅವರು ಮುನ್ನಡೆಸಿ, ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದೀಗ ಮೂರನೇ ತಲೆಮಾರಿನ ಈಶ್ವರ ಮುರಳಿ ಅವರು ಹಿರಿಯರು ಹಾಕಿಕೊಟ್ಟ ವಿಶ್ವಾಸ, ಪ್ರಾಮಾಣಿಕತೆ ಹಾಗೂ ಗುಣಮಟ್ಟದ ಪರಂಪರೆಯನ್ನು ಮುಂದುವರಿಸಿಕೊಂಡು, ಆಧುನಿಕ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರ ವಿಶ್ವಾಸದೊಂದಿಗೆ ಬೆಳೆದುಬಂದಿರುವ ಸಂಸ್ಥೆಯು, ಪಾರಂಪರಿಕ ಚಿನ್ನಾಭರಣಗಳು, ವಿಶೇಷವಾಗಿ ಕರಿಮಣಿ ಆಭರಣಗಳ ವೈವಿಧ್ಯಮಯ ವಿನ್ಯಾಸಗಳು, ಮದುವೆ ಆಭರಣಗಳು, ಹಗುರ ತೂಕದ ಆಭರಣಗಳು ಹಾಗೂ ಆಧುನಿಕ ಚಿನ್ನಾಭರಣ ಸಂಗ್ರಹಗಳ ಮೂಲಕ ವಿಶಿಷ್ಟ ಗುರುತನ್ನು ಹೊಂದಿದೆ.


ಗ್ರಾಹಕರ ವಿಶ್ವಾಸವೇ ನಮ್ಮ ಶತಮಾನದ ಸಾಧನೆ: ಈಶ್ವರ ಮುರಳಿ

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಈಶ್ವರ ಮುರಳಿ, ನಮ್ಮ ನೂರು ವರ್ಷಗಳ ಯಶಸ್ವಿ ಪಯಣಕ್ಕೆ ತಲೆಮಾರುಗಳಿಂದ ನಮ್ಮನ್ನು ಬೆಂಬಲಿಸುತ್ತಾ ಬಂದಿರುವ ಗ್ರಾಹಕರ ವಿಶ್ವಾಸವೇ ಪ್ರಮುಖ ಕಾರಣ. ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರು, ಚಿನ್ನದ ಕುಶಲಕರ್ಮಿಗಳು, ಸಿಬ್ಬಂದಿ ಹಾಗೂ ವ್ಯಾಪಾರ ಸಹವರ್ತಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ ಮತ್ತು ಸಹಕಾರಕ್ಕೆ ನಾವು ಸದಾ ಚಿರಋಣಿಗಳಾಗಿದ್ದೇವೆ ಎಂದು ತಿಳಿಸಿದರು.

ನಮ್ಮ ಹಿರಿಯರು ಹಾಕಿಕೊಟ್ಟ ಪ್ರಾಮಾಣಿಕತೆ ಮತ್ತು ವಿಶ್ವಾಸದ ಪರಂಪರೆಯನ್ನು ಮುಂದುವರಿಸಿಕೊಂಡು, ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ಅನುಗುಣವಾಗಿ ಅತ್ಯುತ್ತಮ ವಿನ್ಯಾಸಗಳು, ಗುಣಮಟ್ಟದ ಆಭರಣಗಳು ಹಾಗೂ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ನಮ್ಮ ಶತಮಾನೋತ್ಸವದ ಸಂಭ್ರಮವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.

ಶತಮಾನೋತ್ಸವದ ಸಂಭ್ರಮಕ್ಕೆ ವಿಶೇಷ ಸಿದ್ಧತೆ: 2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಸಂಸ್ಥೆಯು, ಗ್ರಾಹಕರಿಗಾಗಿ ವಿಶೇಷ ಕಾರ್ಯಕ್ರಮಗಳು, ನೂತನ ಆಭರಣ ಸಂಗ್ರಹಗಳ ಪರಿಚಯ ಹಾಗೂ ಗ್ರಾಹಕ ಕೇಂದ್ರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಪಾರಂಪರಿಕ ಆಭರಣಗಳ ವೈಶಿಷ್ಟ್ಯವನ್ನು ಉಳಿಸಿಕೊಂಡು, ಆಧುನಿಕ ವಿನ್ಯಾಸಗಳು ಹಾಗೂ ಆನ್‌ಲೈನ್ ಚಿನ್ನಾಭರಣ ಖರೀದಿ ಸೌಲಭ್ಯದ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನವನ್ನು ಸಂಸ್ಥೆ ಮಾಡುತ್ತಿದೆ.

ಶತಮಾನೋತ್ಸವದ ವಿಶೇಷ ಲಾಂಛನವು ಸಂಸ್ಥೆಯ ನೂರು ವರ್ಷಗಳ ಪರಂಪರೆ, ಮೂರು ತಲೆಮಾರುಗಳ ಪರಿಶ್ರಮ, ಗ್ರಾಹಕರೊಂದಿಗಿನ ಅವಿನಾಭಾವ ಸಂಬಂಧ ಹಾಗೂ ಭವಿಷ್ಯದ ಹೊಸ ಆಶಯಗಳ ಸಂಕೇತವಾಗಿದೆ. ನೂರು ವರ್ಷಗಳ ಪರಂಪರೆ – ತಲೆಮಾರುಗಳ ವಿಶ್ವಾಸ ಎಂಬ ಧ್ಯೇಯದೊಂದಿಗೆ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ತನ್ನ ಶತಮಾನೋತ್ಸವದ ಸಂಭ್ರಮಕ್ಕೆ ಮುನ್ನುಡಿ ಬರೆದಿದೆ.