ನಕಲಿ ವೈದ್ಯರ ತಡೆಗೆ ಜಿಲ್ಲಾಡಳಿತ ಕ್ರಮ ವಹಿಸಲಿ

| Published : Nov 14 2025, 01:00 AM IST

ನಕಲಿ ವೈದ್ಯರ ತಡೆಗೆ ಜಿಲ್ಲಾಡಳಿತ ಕ್ರಮ ವಹಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಕಲಿ ವೈದ್ಯರು ಯಾವುದೇ ವೈದ್ಯಕೀಯ ಡಿಗ್ರಿ ಇಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆ ನೀಡುತ್ತಾ, ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮತ್ತು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ದಿನೇ ದಿನೇ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಜನರು ತೊಂದರೆಗೆ ಒಳಗಾಗುವಂತಾಗಿದೆ. ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ( ಐಎಂಎ)ಯ ನೂತನ ಜಿಲ್ಲಾಧ್ಯಕ್ಷ ಡಾ. ಜಿ. ಸಿದ್ದಲಿಂಗಪ್ಪ ಅಗ್ರಹಿಸಿದರು.

ತಾಲೂಕಿನ ಅಗಲಗುರ್ಕಿ ಸಮೀಪದ ಹ್ಯಾಪಿ ರಿಟ್ರೀಟ್-ಕೆಎಐ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮಾಯಕರ ಸುಲಿಗೆ

ಇತ್ತೀಚಿಗೆ ನಕಲಿ ವೈದ್ಯರು ಯಾವುದೇ ವೈದ್ಯಕೀಯ ಡಿಗ್ರಿ ಇಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆ ನೀಡುತ್ತಾ, ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮತ್ತು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದು ವೈದ್ಯಕೀಯ ಪದವಿ ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ವೈದ್ಯರು ಮುಜುಗರ ಪಡುವಂತ ವಾತಾವರಣ ನಿರ್ಮಾಣವಾಗುತ್ತದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೆ, ರೋಗಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಆರ್ಥಿಕವಾಗಿ ಸುಲಿಗೆ ಮಾಡುತ್ತಿದ್ದಾರೆ ಈ ಬಗ್ಗೆ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಇಲಾಖೆ ನಿಗಾವಹಿಸಿ ಸಮಸ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದರು.

ಸಂಘ ಕಟ್ಟಡ ನಿರ್ಮಿಸಲು ಸಹಕರಿಸಿ

ಇನ್ನು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಸಂಘ ನಿವೇಶನ ಹೊಂದಿದ್ದು ಇದರ ಕಟ್ಟಡ ಕಾಮಗಾರಿಗೆ ಪ್ರತಿಯೊಬ್ಬರು ಸಹಕರಿಸಬೇಕಿದೆ. ಭಾರತೀಯ ವೈದ್ಯಕೀಯ ಸಂಘ ಹಮ್ಮಿಕೊಳ್ಳುವ ರಾಜ್ಯ ಮತ್ತು ರಾಷ್ಟ್ರ ಮಠದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಪಾಲ್ಗೊಳ್ಳುವಂತಾಗಬೇಕು. ಕೆಲವೇ ವೈದ್ಯರ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಯೋಜನೆ ರೂಪಿಸಿ ಆ ಮೂಲಕ ಒಂದು ಗ್ರಾಮವನ್ನು ದತ್ತು ಪಡೆದು ಆರೋಗ್ಯಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.

ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಕೆ.ಎ,ವೀರಭದ್ರಯ್ಯ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ಇಡೀ ರಾಜ್ಯದಾದ್ಯಂತ ಒಳ್ಳೆಯ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಜನರ ಆರೋಗ್ಯ ಕಾಪಾಡುವ ದಿಸೆಯಲ್ಲಿ ಎಲ್ಲಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಜನರ ಆರೋಗ್ಯ ಕಾಪಾಡುವುದು ನಮ್ಮ ಒಂದು ಭಾಗವಾಗಿದೆ ಸಂಘದ ಅಧ್ಯಕ್ಷರಾದ ಡಾ. ಸಿದ್ದಲಿಂಗಪ್ಪ ಸಲಹೆ ನೀಡಿದಂತೆ ನಕಲಿ ವೈದ್ಯರ ಕಡಿವಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಅವಿನಾಶ್ ಕೆ.ಎಂ.ಮೂಳೆ ರೋಗ ನಿಯಂತ್ರಣದ ಬಗ್ಗೆ ಸವಿಸ್ತರವಾಗಿ ತಿಳಿಸಿದರಲ್ಲದೆ ಡಾ. ವಿವೇಕ್ ಗುಂಡಪ್ಪ ಶ್ವಾಸಕೋಶದ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು.

ನಕಲಿ ವೈದ್ಯರ ಮೇಲೆ ಕ್ರಮ

ಭಾರತೀಯ ವೈದ್ಯಕೀಯ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ, ಕಾರ್ಯದರ್ಶಿ ಡಾ.ಮೋಹನ್ ಬಾಬು ಕೆ.ಎನ್. ಮಾತನಾಡಿ, ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡು. ನಕಲಿ ವೈದ್ಯರಿಂದಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಹಾಗೂ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಒದಗಿಸುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ.ಕೆ.ಆರ್.ಅನಂತ್, ಹಿರಿಯ ವೈದ್ಯರಾ ಲಯನ್ ಡಾ. ಕೆಪಿ.ಶ್ರೀನಿವಾಸಮೂರ್ತಿ, ಡಾ. ಶಾಮಸುಂದರ್, ಡಾ.ಪಿ.ವಿ.ರಮೇಶ್, ಡಾ.ವೆಂಕಟಾಚಲಪತಿ, ಡಾ.ಪ್ರಶಾಂತ್ ಮೂರ್ತಿ,ಡಾ.ವಿಜಯ,ಡಾ.ಶ್ವೇತ, ಡಾ. ನರಸಿಂಹಮೂರ್ತಿ, ಮತ್ತಿತರರು ಇದ್ದರು.