ಸಾರಾಂಶ
ಗದಗ, ಕಾರವಾರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಹ ಜಿಲ್ಲಾಮಟ್ಟದ ಉದ್ಯೋಗ ಮೇಳಗಳನ್ನು ಇದೇ ವರ್ಷ ಏರ್ಪಡಿಸಲು ಚಿಂತಿಸಲಾಗಿದೆ.
ಧಾರವಾಡ:
ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಕೆ.ಇ. ಬೋರ್ಡ್ ಕಾಲೇಜು ಜಂಟಿಯಾಗಿ ಜೂ. 30ರಂದು ಇಲ್ಲಿಯ ಶಿವಾಜಿ ವೃತ್ತ ಬಳಿಯ ಕೆ.ಇ. ಬೋರ್ಡ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 30ರಂದು ಬೆಳಗ್ಗೆ 10ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೇಳಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಪಾಲ್ಗೊಳ್ಳಲಿದ್ದಾರೆ. ಕೆ.ಇ. ಬೋರ್ಡ್ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಉಪಸ್ಥಿತರಿರುವರು. ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬೆಂಗಳೂರು, ಪುಣೆ, ಹೈದರಾಬಾದ್, ಕೇರಳ, ಬೆಳಗಾವಿ ಸೇರಿ ವಿವಿಧೆಡೆಯಿಂದ 51 ಕಂಪನಿಗಳು ಭಾಗವಹಿಸಲಿವೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ನೋಂದಣಿ ಕಾರ್ಯ ನಡೆಯಲಿದೆ. ನೋಂದಣಿಗಾಗಿ ಎಂಟು ಕೌಂಟರ್, ಸಂದರ್ಶನ ನಡೆಸಲು 18 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಮೇಳದ ಯಶಸ್ವಿಗೆ 41 ಉಪನ್ಯಾಸಕರು ಹಾಗೂ 100 ಎನ್ನೆಸ್ಸೆಸ್ ಸ್ವಯಂ ಸೇವಕರ ಸಹಾಯ ಪಡೆಯಲಾಗಿದೆ ಎಂದ ಅವರು, ಬಿಎ, ಬಿಕಾಂ, ಬಿಎಸ್‌ಸಿ, ಎಂಎ, ಎಂಎಸ್ಸಿ, ಬಿಬಿಎ, ಬಿಸಿಎ, ಎಂಬಿಎ, ಬಿ.ಇಡಿ, ಬಿಇ, ಎಂಟೆಕ್ ಸೇರಿ ಎಲ್ಲ ಬಗೆಯ ಪದವೀಧರರು, ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಹಾಗೂ ಡಿಪ್ಲೊಮಾ ತೇರ್ಗಡೆ ಹೊಂದಿದವರು ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.ಈಗಾಗಲೇ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಕರೆ ಮಾಡಿ ಮೇಳದ ಮಾಹಿತಿ ಪಡೆದಿದ್ದು ಅಷ್ಟೂ ಅಭ್ಯರ್ಥಿಗಳು ಮೇಳದ ಲಾಭ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ. ಸಂಜೆ 5ರ ವರೆಗೆ ಸಂದರ್ಶನ ನಡೆಯಲಿದೆ. ನಂತರ ಸಮಾರೋಪ ಸಮಾರಂಭ ಜರುಗಲಿದ್ದು, ಇದೇ ವೇಳೆ ಸಂದರ್ಶನದ ಮಾಡಿದ ಕಂಪನಿಗಳು ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ಕೊಡುವಂತೆ ಮನವಿ ಮಾಡಲಾಗಿದೆ ಎಂದರು.
ಗದಗ, ಕಾರವಾರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಹ ಜಿಲ್ಲಾಮಟ್ಟದ ಉದ್ಯೋಗ ಮೇಳಗಳನ್ನು ಇದೇ ವರ್ಷ ಏರ್ಪಡಿಸಲು ಚಿಂತಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಮೋಹನ ಸಿದ್ದಾಂತಿ, ಡಾ. ಸುನೀತ ಪುರೋಹಿತ, ಡಿ.ಎಸ್. ರಾಜಪುರೋಹಿತ, ಎಸ್.ಎಲ್. ಶೇಖರಗೌಡ ಇದ್ದರು.ದರು.