ಸಾರಾಂಶ
ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಖರೀದಿ ಭರಾಟೆ ಜೋರಾಗಿ ಸಾಗಿದೆ. ಹಬ್ಬದ ಹಿನ್ನೆಲೆ ಬುಧವಾರ ಗಾಂಧಿ ಬಜಾರ್‌ನಲ್ಲಿ ಜನಜಂಗುಳಿ ಕಂಡುಬಂತು. ಮಹಿಳೆಯರು ಆಕಾಶಬುಟ್ಟಿ, ದೀಪ ಖರೀದಿಯಲ್ಲಿ ಬಿಜಿಯಾಗಿದ್ದರು. ವಿವಿಧ ರೀತಿಯ ಹಣತೆಗಳು, ಲೈಟ್‌ಗಳು, ಆಕಾಶಬುಟ್ಟಿ, ಪ್ಲಾಸ್ಟಿಕ್ ಹೂವುಗಳ ಮಾರಾಟ ಜೋರಾಗಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಖರೀದಿ ಭರಾಟೆ ಜೋರಾಗಿ ಸಾಗಿದೆ. ಹಬ್ಬದ ಹಿನ್ನೆಲೆ ಬುಧವಾರ ಗಾಂಧಿ ಬಜಾರ್‌ನಲ್ಲಿ ಜನಜಂಗುಳಿ ಕಂಡುಬಂತು. ಮಹಿಳೆಯರು ಆಕಾಶಬುಟ್ಟಿ, ದೀಪ ಖರೀದಿಯಲ್ಲಿ ಬಿಜಿಯಾಗಿದ್ದರು. ವಿವಿಧ ರೀತಿಯ ಹಣತೆಗಳು, ಲೈಟ್‌ಗಳು, ಆಕಾಶಬುಟ್ಟಿ, ಪ್ಲಾಸ್ಟಿಕ್ ಹೂವುಗಳ ಮಾರಾಟ ಜೋರಾಗಿತ್ತು.ನಗರದ ಫ್ರೀಡಂ ಪಾರ್ಕ್‌ನಲ್ಲಿ ನೂರಕ್ಕೂ ಹೆಚ್ಚು ಪಟಾಕಿ ಸ್ಟಾಲ್‌ಗಳನ್ನು ಹಾಕಿದ್ದು, ಈ ಬಾರಿ ವಿಶೇಷವೆಂದರೆ ಮಕ್ಕಳ ಆಟಿಕೆ ವಸ್ತುಗಳನ್ನು ಆಡಲು ಕಲ್ಪಿಸಲಾಗಿದೆ. ಬೆಲೆ ಏರಿಕೆ ನಡುವೆಯೂ ಪಟಾಕಿ ಖರೀದಿ ಸಂಭ್ರಮ ಜೋರಾಗಿತ್ತು.
ನಗರ ಸೇರಿದಂತೆ ಜಿಲ್ಲಾದ್ಯಂತ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿ ಭರಾಟೆ ಈಗಾಗಲೇ ಆರಂಭವಾಗಿದ್ದು, ಇದು ಪಟಾಕಿ ವರ್ತಕರನ್ನು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ವಿವಿಧೆಡೆ ಕೂಡ ಪಟಾಕಿ ಮಳಿಗೆಗಳನ್ನು ಹಾಕಲಾಗಿದ್ದು, ವ್ಯಾಪಾರದಲ್ಲಿ ಕಳೆದ ಬಾರಿಗಿಂತಲೂ ಸುಧಾರಣೆ ಕಂಡಿದೆ ಎನ್ನುತ್ತಾರೆ ವರ್ತಕರು.ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿ ಬಜಾರ್, ನೆಹರು ರಸ್ತೆ, ಬಿಎಚ್ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ ಸೇರಿದಂತೆ ಹಲವೆಡೆ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆಎಲೆ, ಬಾಳೆಕಂದು ವ್ಯಾಪಾರ ಜೋರಾಗಿತ್ತು. ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಸಿಡಿಮದ್ದು ಹಾಗೂ ಮಣ್ಣಿನ ಹಣತೆ ಕೊಂಡುಕೊಳ್ಳುವ ದೃಶ್ಯ ಕಂಡುಬಂತು.ಹಣತೆ ವ್ಯಾಪಾರ ಜೋರು:ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ನೀಡುವ ಹಣತೆ, ಭರ್ಜರಿ ಮಾರಾಟವಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ. ಕೆಲವಡೆ ಸಣ್ಣ ಹಣತೆಗಳು ₹30 ಹಾಗೂ ದೊಡ್ಡ ಹಣತೆಗಳು ₹50ಗೆ ಮಾರಲಾಯಿತು. ವಿಧ-ವಿಧವಾದ ಹಣತೆಗಳನ್ನು ಮಾರಾಟಕ್ಕಿಡಲಾಗಿದ್ದು, ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿಸಿದರು.ಲಕ್ಷ್ಮಿ ಪೂಜೆಗೆ ಸಿದ್ಧತೆ:ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಎರಡು ದಿನಗಳ ಕಾಲ ಲಕ್ಷ್ಮಿ ಪೂಜೆ ನೆರವೇರಲಿದೆ. ಇದಕ್ಕಾಗಿ ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯಲ್ಲಿ ಹೂವು ಹಣ್ಣು ಸೇರಿದಂತೆ ಲಕ್ಷ್ಮಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿ ಸಾಗಿದೆ.