ಸಾರಾಂಶ
ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾರೊಂದಿಗೆ ತೆರಳಿ ಪುಣ್ಯಸ್ನಾನ ಮಾಡಿದರು.
ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ತೆರಳಿದ ಡಿ.ಕೆ.ಶಿವಕುಮಾರ್ ಅವರನ್ನು ಉತ್ತರ ಪ್ರದೇಶದ ಕೈಗಾರಿಕಾ ಸಚಿವ ನಂದಗೋಪಾಲ ಗುಪ್ತಾ ಅವರು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು.
ಬಳಿಕ ಶಿವಕುಮಾರ್ ಹಾಗೂ ಪತ್ನಿ ಉಷಾ ಅವರು ತ್ರಿವೇಣಿ ಸಂಗಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಪುಣ್ಯಸ್ನಾನ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, ‘ಹರ ಹರ ಮಹಾದೇವ. ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.
ಐತಿಹಾಸಿಕ ಕ್ಷಣ: ಪವಿತ್ರ ಸ್ನಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕುಂಭಮೇಳವನ್ನು ಇಷ್ಟೊಂದು ಪವಿತ್ರ ರೀತಿಯಲ್ಲಿ ನಡೆಸಿದ್ದಕ್ಕಾಗಿ ಎಲ್ಲಾ ಸಂಘಟಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಒಬ್ಬರ ಜೀವನದಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಹೇಳಿದರು.
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ನಡೆಯುವ ಕುಂಭಮೇಳಕ್ಕೆ ಈಗಾಗಲೇ ಕೆಲ ಸ್ವಾಮೀಜಿಗಳು ಮಾತುಕತೆ ನಡೆಸಿದ್ದಾರೆ. ನಮ್ಮ ರಾಜ್ಯದಲ್ಲಿ ನಡೆಯುವ ಕುಂಭಮೇಳದಲ್ಲೂ ಭಾಗವಹಿಸುತ್ತೇನೆ. ಏರೋ ಇಂಡಿಯಾ, ಇನ್ವೆಸ್ಟ್ ಕರ್ನಾಟಕ ಸೇರಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇನೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))