ಯುಕ್ತಿ, ಭಕ್ತಿ, ಶಕ್ತಿ ಇದ್ದರೆ ಮುಕ್ತಿ ನಿಶ್ಚಿತ

| Published : Feb 10 2025, 01:45 AM IST

ಸಾರಾಂಶ

ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಮಹಾ ಮಹೋತ್ಸವದಲ್ಲಿ ಆಚಾರ್ಯ ಶ್ರೀ 108 ಜಿನಸೇನ ಮುನಿ ಮಹಾರಾಜರು ಆಶಿರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಧರ್ಮ ಮಾಧ್ಯಮದಿಂದ ಮೋಕ್ಷ ಪ್ರಾಪ್ತಿ ಸಾಧ್ಯ. ಯುಕ್ತಿ, ಭಕ್ತಿ ಹಾಗೂ ಶಕ್ತಿ, ಈ ಮೂರು ಇದ್ದರೆ ಮುಕ್ತಿ ನಿಶ್ಚಿತ ಎಂದು ಧರ್ಮಕೇಸರಿ ಆಚಾರ್ಯ ಶ್ರೀ 108 ಜಿನಸೇನ ಮುನಿ ಮಹಾರಾಜರು ಹೇಳಿದರು.

ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವದ ಕೊನೆಯ ದಿನವಾದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರಾವಕಿಯರು ಇಂದು ಮಕ್ಕಳನ್ನು ಬಸದಿಗಳಿಗೆ ಕಳುಹಿಸಿಕೊಟ್ಟು ಜೈನ ಧರ್ಮದ ಆಚಾರ-ವಿಚಾರ ಹಾಗೂ ಪರಂಪರೆಗಳನ್ನು ತಿಳಿಸಬೇಕು. ಆತ್ಮಕಲ್ಯಾಣಕ್ಕಾಗಿ ಭಗವಂತನ ದರ್ಶನ ಪಡೆದು ಆತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು. ಪಾರ್ಶ್ವನಾಥರಿದ್ದಲ್ಲಿ ಕಷ್ಟಗಳು ಸಹಜ ಆದರೆ ಆ ಕಷ್ಟಗಳನ್ನು ತೊರೆದು ಭಗವಂತರ ಭಕ್ತಿಯಲ್ಲಿ ಲೀನರಾದಾಗ ಆತ್ಮ ಶುದ್ಧಿ ಸಾಧ್ಯ. ತನು, ಮನ, ಧನದಿಂದ ಮಾಡಿರುವ ಈ ಪಂಚಕಲ್ಯಾಣ ಮಹಾ ಮಹೋತ್ಸವವು ಸಾರ್ಥಕತೆ ಕಂಡಿದ್ದು ಗರ್ಭಕಲ್ಯಾಣದಿಂದ ಮೋಕ್ಷ ಕಲ್ಯಾಣದವರೆಗೆ ಕಾರ್ಯಕ್ರಮ ನಡೆದಿದ್ದು ಸಂಸಾರದಲ್ಲಿಲ್ಲದ ಸುಖ ಮುಕ್ತಿಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಕಾರ್ಯಕ್ರಮ ಮಾನವನ ಕುಲದ ಒಳಿತಿಗಾಗಿ ಮಾಡುತಿದ್ದು, ಜೈನ ಧರ್ಮದ ಪರಂಪರೆಯನ್ನು ಇಂದಿನ ಯುವಕರು ಮುನ್ನಡೆಸಿಕೊಂಡು ಹೋಗಬೇಕು. ಮಹಿಳೆಯರು ತಮ್ಮ ಮಕ್ಕಳಿಗೆ ಸ್ವಚಾರಿತ್ರ್ಯವುಳ್ಳ ಸದ್ವಿಚಾರಗಳನ್ನು ಪರಿಪಾಲನೆ ಮಾಡಿಸಿ ಧರ್ಮಾಚರಣೆಯತ್ತ ಅನಿಯಾಗುವಂತೆ ಮಾಡಬೇಕೆಂದು ತಿಳಿಸಿದ ಅವರು, ಯಾವುದೇ ಧರ್ಮಾಚರಣೆಗಳಿಗೆ ಸೇವೆ ಮಾಡಲು ಸದಾ ಸಿದ್ಧರಿರುವುದಾಗಿ ತಿಳಿಸಿದರು.

ಕೊನೆಯಲ್ಲಿ ಜೈನ ಸಮಾಜದ ಟ್ರಸ್ಟ್‌ ಕಮಿಟಿ ಅಧ್ಯಕ್ಷರಾದ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ ಮಾತನಾಡಿ, ಜೈನ ಧರ್ಮ ಉಳಿದಿದ್ದರೆ ಇಂದು ತಾಯಂದಿರರಿಂದ ಉಳಿದಿದೆ. ಪಂಚಕಲ್ಯಾಣ ಮಹೋತ್ಸವದಿಂದ ಧರ್ಮಾಚರಣೆ ಬಗ್ಗೆ ಮಕ್ಕಳಿಗೆ ಸಂಸ್ಕಾರಗಳನ್ನು ಮುನಿ ಮಹಾರಾಜರು ಧಾರೆಯೆರೆದಿದ್ದು ಸಮಸ್ತರಲ್ಲಿ ಧರ್ಮ ಜಾಗೃತಿಯಾಗಿದೆ. ತಾಯಂದಿರರು ಮಕ್ಕಳನ್ನು ಜೈನ ಮಂದಿರಗಳಿಗೆ ಕಳುಹಿಸುವ ಕಾರ್ಯ ನಡೆಯಬೇಕು ಎಂದ ಅವರು, ನಾನು ಎಂಬ ಅಹಂಕಾರ ತೊರೆದಾಗ ಮುಕ್ತಿ ಪ್ರಾಪ್ತಿಯಾಗಲು ಸಾಧ್ಯ. ಜೈನ ಧರ್ಮದ ಆಚರಣೆ-ಪಾಲನೆ ಇಂದು ಅನಿವಾರ್ಯವಾಗಿದ್ದು ಎಲ್ಲರೂ ಧರ್ಮದ ರಕ್ಷಣೆ ಮಾಡುವಂತೆ ಕರೆಯಿತ್ತರು.

ವೇದಿಕೆಯಲ್ಲಿ ಕ್ಷುಲಕ ಶ್ರೀಜಯಸೇನ ಮಹಾರಾಜ, 105 ನಿರಮೋಹಿನಿಮತಿ ಮಾತಾಜಿ, 105 ನಿರಲೋಭಿಮತಿ ಮಾತಾಜಿ, 105 ನಿರದೋಷಿಮತಿ ಮಾತಾಜಿ, 105 ನಿಸ್ಸಂಗಮತಿ ಮಾತಾಜಿ, ಮುಂತಾದ ಮುನಿಗಳು ಹಾಗೂ ಮಾತಾಜಿಯವರು ವೇದಿಕೆಯಲ್ಲಿದ್ದರು. ಪವನ ಚಂದರ ಉಪಾಧ್ಯೆ, ಜೀನೇಂದ್ರ ಶ್ರೀಕಾಂತ ಉಪಾಧ್ಯ, ವೃಷಭ ಉಪಾಧ್ಯೆ, ಮಹಾವೀರ ಉಪಾಧ್ಯೆ, ಹಣಮಂತಗೌಡಾ ಪಾಟೀಲ, ಶಾಂತಿನಾಥ ಪಾಟೀಲ, ಅಣ್ಣಾಗೌಡಾ ಪಾಟೀಲ, ಅಂಜನಾ ಗೋಟೂರೆ, ಜಿನದತ್ತ ಪಾಟೀಲ ಮಾತನಾಡಿದರು. ನಿರ್ದೇಶಕ ಚೇತನ ಪಾಟೀಲ, ರಾಜು ಅವಟೆ, ಮುಂತಾದವರು ಜೈನ ಸಮಾಜದ ಟ್ರಸ್ಟ್‌ ಕಮಿಟಿ ಸರ್ವ ಸದಸ್ಯರು, ಯುವ ಗ್ರುಫ್‌ ಸದಸ್ಯರು, ಸಮಸ್ತ-ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.