ಸಾರಾಂಶ
ಶಿರಸಿ: ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿಯನ್ನು ನಾವು ಅಲುಗಾಡಿಸುತ್ತಿಲ್ಲ. ಅವರ ಪಕ್ಷದವರೇ ಆದ ಡಿ.ಕೆ. ಶಿವಕುಮಾರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಆ ಪ್ರಯತ್ನ ಮಾಡುದ್ದಾರೆ ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಆರೋಪಿಸಿದರು.ಮಂಗಳವಾರ ನಗರದ ಗಾಣಿಗರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಾಗಾರ, ನಗರಸಭೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. ೪೦ರಷ್ಟು ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದ ಕಾಂಗ್ರೆಸಿಗರು, ಈಗ ತಾವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅಧಿಕಾರಕ್ಕೆ ಬಂದ ನಾಲ್ಕೈದು ತಿಂಗಳಿನಲ್ಲಿಯೇ ಭ್ರಷ್ಟಾಚಾರ ಆರಂಭಿಸಿ, ಈಗ ಶೇ. ೭೦ರಷ್ಟು ಭ್ರಷ್ಟಾಚಾರದ ಸರ್ಕಾರವಾಗಿದೆ. ಈಗಾಗಲೇ ಒಬ್ಬ ಸಚಿವರ ತಲೆದಂಡ ಸಹ ಆಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಉತ್ತಮ ಆಡಳಿತವನ್ನು ಕಾಂಗ್ರಸ್ಸಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೋದಿಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸ್ಥಿತಿ ನೋಡಿದರೆ, ಕಾಂಗ್ರೆಸ್ ಸರ್ಕಾರ ಬಹಳ ದಿನ ನಡೆಯುವಂತೆ ಕಾಣುತ್ತಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಬೇರು ಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯತೆ ಇದೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು, ಕಳೆದ ವರ್ಷದ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ೧.೨೫ ಲಕ್ಷ ಜನ ಸದಸ್ಯರಾಗಿ ನೋಂದಣಿಗೊಂಡಿದ್ದರು. ಸದಸ್ಯತ್ವ ಅಭಿಯಾನ ಮಂಡಲ, ಜಿಲ್ಲಾಧ್ಯಕ್ಷರಿಗಷ್ಟೇ ಸೀಮಿತವಲ್ಲ. ಜನಪ್ರತಿನಿಧಿಗಳು ಪಾಲ್ಗೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ೫ರಿಂದ ಎರಡಕ್ಕಿಳಿದಿದೆ. ಹೀಗಾಗಿ, ಕಾರ್ಯಕರ್ತರ ಶ್ರಮದ ಅಗತ್ಯತೆ ಜಾಸ್ತಿ ಇದೆ. ನಮಗೆ ಬೇರೆ ದೇಶ ಇಲ್ಲ. ನಾವು ಇಲ್ಲೇ ಇರಬೇಕಾದವರು. ಪಕ್ಷ ಬಲಪಡಿಸಿದರೆ ಮುಂದೆ ದೇಶವೇ ನಮ್ಮನ್ನು ಕಾಯುತ್ತದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಏಕವಚನದಲ್ಲಿ ಮಾತನಾಡುವ ಸಂಸ್ಕೃತಿಯವರು. ಗೌರವ ಕೊಟ್ಟು ಗೌರವ ಪಡೆಯುವ ಸಂಸ್ಕೃತಿಯವರಲ್ಲ. ಅಧಿವೇಶನದಲ್ಲಿ ನಾವು ಬಾವಿಗಿಳಿದ ವೇಳೆ ಸಭಾಧ್ಯಕ್ಷರೂ ಅಜೆಂಡಾದಲ್ಲಿ ಇಲ್ಲದ ವಿಷಯಕ್ಕೆ ಅವಕಾಶ ಮಾಡಿಕೊಟ್ಟು ನಾಲ್ಕು ತಾಸು ನಾವು ನಿಂತೇ ಇರುವಂತೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ ಅವರಿಗೆ ನಾನು ಏಕವಚನದಲ್ಲಿಯೇ ಮಾತನಾಡುತ್ತೇನೆ. ಪಕ್ಷದ ವರಿಷ್ಠರು ತಡೆದರೂ ನಾನು ಏಕವಚನದಲ್ಲಿಯೇ ಮಾತನಾಡುತ್ತೇನೆ ಎಂದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿದರು. ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ವಿವೇಕಾನಂದ ವೈದ್ಯ, ಪಕ್ಷದ ಪ್ರಮುಖರಾದ ವೆಂಕಟೇಶ ನಾಯ್ಕ, ಕೆ.ಜಿ. ನಾಯ್ಕ, ಎಂ.ಜಿ. ನಾಯ್ಕ, ಸಂತೋಷ ತಳವಾರ, ಈಶ್ವರ ನಾಯ್ಕ, ವಿನೋದ ನಾಯ್ಕ, ರಾಘವೇಂದ್ರ ಭಟ್ ಮತ್ತಿತರರು ಇದ್ದರು.
ಹೆಬ್ಬಾರ ವಿರುದ್ಧ ರೂಪಾಲಿ ಕಿಡಿಶಾಸಕ ಶಿವರಾಮ ಹೆಬ್ಬಾರ ಯಾವ ಪಕ್ಷದಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಮಾನ ಮರ್ಯಾದೆ ಇದ್ದರೆ ತಕ್ಷಣವೇ ಪಕ್ಷ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬೀಳಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಿಡಿಕಾರಿದರು.ಇಲ್ಲಿಯೇ ಇದ್ದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಬದಲು ರಾಜೀನಾಮೆ ನೀಡಿ ಹೋಗಿ. ನಮಗೆ ಪಕ್ಷ ಸಂಘಟಿಸುವುದು ತಿಳಿದಿದೆ ಎಂದರು.
ಶಿವರಾಮ ಹೆಬ್ಬಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದವರೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು. ಜಿಲ್ಲೆಯಲ್ಲಿ ಸಚಿವರಾಗುವ ಸಾಧ್ಯತೆ ಅನೇಕರಿಗಿದ್ದರೂ ಹೆಬ್ಬಾರ ಅವರಿಗೆ ಈ ಸ್ಥಾನ ಕೊಟ್ಟಿದ್ದರು. ಬಿಜೆಪಿ ಸರ್ಕಾರ ಬಂದರೆ ಸಾಕು ಎಂದು ನಾವೂ ಸಹಕಾರ ಕೊಟ್ಟಿದ್ದೇವೆ. ಆದರೆ, ಈಗ ಕಾಂಗ್ರೆಸ್ ಕಡೆ ಕಾಲಿಟ್ಟಿರುವ ಹೆಬ್ಬಾರ್, ಮುಡಾ ಹಗರಣದಲ್ಲಿ ಮಾಜಿ ಸಚಿವರೂ ಇದ್ದಾರೆ, ಯಡಿಯೂರಪ್ಪನವರೂ ಇದ್ದಾರೆ ಎನ್ನತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.