ಕೊನೇ ಭಾಗದ ಜಮೀನುಗಳಿಗೆ ನಿರಂತರ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ: ಕೆ.ಎಂ.ಉದಯ್

| Published : Aug 28 2024, 12:48 AM IST

ಕೊನೇ ಭಾಗದ ಜಮೀನುಗಳಿಗೆ ನಿರಂತರ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ: ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಎಸ್ ಅಣೆಕಟ್ಟೆ ಭರ್ತಿಗೂ ಮುನ್ನವೇ ನಿಗಮದ ಅಧಿಕಾರಿಗಳು ಮತ್ತು ಸಚಿವರೊಟ್ಟಿಗೆ ಹಲವು ಸಭೆ ಮಾಡಿ ಚರ್ಚಿಸಿ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಥಮ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಅಧಿಕಾರಿಗಳು ನೀರು ಹರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವೇಶ್ವರಯ್ಯ ನಾಲೆಯ ತಾಲೂಕಿನ ಕೊನೆ ಭಾಗದ ಜಮೀನುಗಳಿಗೆ ನಿರಂತರವಾಗಿ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನಾದ್ಯಂತ ಶೇ.75ರಷ್ಟು ಕೆರೆ, ಕಟ್ಟೆಗಳು ಭರ್ತಿಯಾಗಿದೆ. ರೈತರು ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ನಡೆದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊನೆಯ ಭಾಗಕ್ಕೆ ನೀರು ಹರಿಸಲು ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಕೆಲ ವ್ಯಕ್ತಿಗಳು ಇಲ್ಲಸಲ್ಲದ ಅಪಪ್ರಚಾರ ಮಾಡುವ ಮೂಲಕ ರೈತರ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.

ಕೆ.ಆರ್.ಎಸ್ ಅಣೆಕಟ್ಟೆ ಭರ್ತಿಗೂ ಮುನ್ನವೇ ನಿಗಮದ ಅಧಿಕಾರಿಗಳು ಮತ್ತು ಸಚಿವರೊಟ್ಟಿಗೆ ಹಲವು ಸಭೆ ಮಾಡಿ ಚರ್ಚಿಸಿ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಥಮ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಅಧಿಕಾರಿಗಳು ನೀರು ಹರಿಸುತ್ತಿದ್ದಾರೆ ಎಂದರು.

ನಾಲೆಗಳಲ್ಲಿ ನಿರಂತರವಾಗಿ ನೀರು ಹರಿಸಿ ಹರಿಸುತ್ತಿದ್ದು, ರೈತರು ಈಗಾಗಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಸಕ್ತ ದಿನಗಳಲ್ಲಿ ಮಳೆ ಕೊರತೆಯಾಗಿಒಣಹವೆ ಮುಂದುವರೆದಿದೆ. ಇದರಿಂದ ನೀರಿನ ಕೊರತೆ ಕಾಣಿಸುತ್ತಿದೆ. ಈ ಸಂಬಂಧ ಅಧಿಕಾರಿಗಳೊಟ್ಟಿಗೆ ಚರ್ಚಿಸಲಾಗಿದೆ ಎಂದರು.

ತಾಲೂಕಿನಾದ್ಯಂತ ಶೇ.60ರಷ್ಟು ಕೃಷಿ ಚಟುವಟಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ ರೈತರು ಜಮೀನನ್ನು ಹದಗೊಳಿಸುತ್ತಿದ್ದು ಹಂತ ಹಂತವಾಗಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ರೈತರು ಬೇಸಾಯ ಮಾಡಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಈ ವೇಳೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜು, ಅಜಯ್, ರಾಜೇಶ್ ಇದ್ದರು.