ಕನ್ನಡಪ್ರಭ ವಾರ್ತೆ ಸಿರಿಗೆರೆ

ಒಂದು ಹನಿ ನೀರನ್ನೂ ವ್ಯರ್ಥ ಮಾಡದಂತೆ ಸದ್ಭಳಕೆ ಮಾಡುವತ್ತ ರೈತರು ಗಮನ ನೀಡಬೇಕು. ಆ ಹಿನ್ನೆಲೆಯಲ್ಲಿಯೇ ಕ್ಷೇತ್ರದ ಎಲ್ಲಾ ಕಡೆ 450 ಕೋಟಿ ರು. ವೆಚ್ಚದಲ್ಲಿ ನೂರಾರು ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಸಿರಿಗೆರೆ ಸಮೀಪದ ಮುತ್ತುಗದೂರು ಗ್ರಾಮದಲ್ಲಿ 1 ಕೋಟಿ 30 ಲಕ್ಷ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿದ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ನೀರನ್ನು ಕಾಪಾಡುವುದು ಬಹಳ ಅವಶ್ಯಕವಾಗಿದೆ. ನೀವು ನೀರನ್ನು ಕಾಪಾಡಿದರೆ ಬೋರ್‌ವೆಲ್‌ಗಳಲ್ಲಿ ನೀರು ಉಳಿಯುತ್ತದೆ. ಇದರಿಂದ ನಿಮ್ಮ ಕೃಷಿಯ ಬದುಕು ಸಾಗುತ್ತದೆ ಎಂದರು.

ರೈತರ ಹಿತ ಕಾಪಾಡಲೆಂದೇ ಹಿರೇಕಂದವಾಡಿ, ಹಿರೇಎಮ್ಮಿಗನೂರು, ಮಲ್ಲಾಡಿಹಳ್ಳಿ, ಹನುಮಲಿ, ತುಪ್ಪದಹಳ್ಳಿ, ಎನ್.ಜಿ.ಹಳ್ಳಿ, ತಾಳ್ಯ, ಟಿ.ನುಲೇನೂರು ಹೀಗೆ ಹದಿನೇಳು ಕಡೆ ಹೊಸದಾಗಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲಾಗುತ್ತಿದೆ.


ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐನೂರು ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಜೋಗ್‍ಫಾಲ್ಸ್‌ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದ್ದು, ಇಲ್ಲಿಂದ ಉಳಿದ ಎಲ್ಲಾ ಸಬ್‍ಸ್ಟೇಷನ್‍ಗಳಿಗೆ ಸರಬರಾಜಾಗಲಿದೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲಾ ವಿದ್ಯುತ್ ಪವರ್ ಸ್ಟೇಷನ್‍ಗಳಿಗೂ ಚಾಲನೆ ನೀಡಲಾಗುವುದು.

ಚುನಾವಣೆಯಲ್ಲಿ ಮತ ಹಾಕುವುದು ಒಂದು ಸೆಕೆಂಡಿನ ಕೆಲಸ. ಯಾರು ನಿಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸಿ ಒಳ್ಳೆಯದು ಮಾಡುತ್ತಾರೆ ಎನ್ನುವುದನ್ನು ಆಲೋಚಿಸಿ ನಂತರ ಓಟು ನೀಡಿ. ಯಾರಿಂದಲೂ ಅರ್ಜಿ ಪಡೆದಿಲ್ಲ. 493 ಹಳ್ಳಿ ಜನರು ನನ್ನ ಕುಟುಂಬದವರೆಂದು ತಿಳಿದು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ. ನಾನು ಕೂಡ ರೈತ. ಹಾಗಾಗಿ ರೈತರ ಸಮಸ್ಯೆಗಳೇನೆಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಇನ್ನು ಐವತ್ತು ವರ್ಷಗಳ ಕಾಲ ಕರೆಂಟ್ ಮಿಣಿಕ್ ಅನ್ನಬಾರದು. ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಪೂರೈಸುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ಹೊಳಲ್ಕೆರೆ ಬಿಜೆಪಿ.ಮಂಡಲ ಮಾಜಿ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಎಂ.ಕೆ.ರುದ್ರಣ್ಣ, ದೇವರಾಜ್, ಓಂಕಾರಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪ್ರಭು, ಶಿವು, ಪ್ರಕಾಶ್, ಮಂಜುನಾಯ್ಕ, ಓಂಕಾರಸ್ವಾಮಿ, ರಮೇಶಣ್ಣ, ಜಗದೀಶ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.