ಕನ್ನಡಪ್ರಭ ವಾರ್ತೆ ಬೀದರ್

ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (SIR-2026) ಕಾರ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಜಿಲ್ಲೆಯ ಅಧಿಕಾರಿಗಳಿಗೆ ಬೀದರ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕೊಹಿನೂರ ವ್ಯಾಪ್ತಿಯಲ್ಲಿ ಶೇ.100 ರಷ್ಟು ಡಿಜಿಟಲೀಕರಣ ಕಾರ್ಯವನ್ನು ಜಿಲ್ಲೆಯಲ್ಲೇ ಪ್ರಥಮವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಗೌರವ ಸಮರ್ಪಿಸಲಾಗಿದೆ.

ಜಿಲ್ಲೆಯಲ್ಲೇ ಪ್ರಥಮ ಸಾಧನೆ: ಕೊಹಿನೂರ ಹೋಬಳಿಯ ಮತಗಟ್ಟೆ ಸಂಖ್ಯೆ 248ರ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ನಮೂನೆ ಗಳನ್ನು (Enumeration Forms) ಯಶಸ್ವಿಯಾಗಿ ವಿತರಿಸಲಾಗಿತ್ತು, ಅಷ್ಟೇ ಅಲ್ಲದೆ, ಇಡೀ ಬೀದರ್‌ ಜಿಲ್ಲೆಯಲ್ಲೇ ಅತ್ಯಂತ ವೇಗವಾಗಿ ಶೇ.100 ರಷ್ಟು ಡಿಜಿಟಲೀಕರಣ (Digitization) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಈ ತಂಡ ಪಾತ್ರವಾಗಿದೆ. ದೇವರಾಜ ಮೈದೂರು ಅವರು ಕೊಹಿನೂರ ಹೋಬಳಿಯ ಗ್ರಾಮ ಆಡಳಿತ ಅಧಿಕಾರ ಹಾಗೂ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸೂಕ್ತ ಮೇಲ್ವಿಚಾರಣೆ ಮತ್ತು ಅತ್ಯುತ್ತಮ ಮಾರ್ಗದರ್ಶನದ ಮೂಲಕ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.

ಸುಮಾ ಪಾಟೀಲ (ಸಹ ಶಿಕ್ಷಕಿ) ಕೊಹಿನೂರ ವಾಡಿಯ ಅಂಗನವಾಡಿ ಕೇಂದ್ರದ ಮತಗಟ್ಟೆ ಸಂಖ್ಯೆ 248ರ ಮತಗಟ್ಟೆ ಅಧಿಕಾರಿಯಾಗಿ (BLO) ಅತ್ಯಂತ ಜವಾಬ್ದಾರಿಯಿಂದ ಮನೆ ಮನೆಗೆ ಫಾರ್ಮ್‌ಗಳನ್ನು ತಲುಪಿಸಿ ಡಿಜಿಟಲ್ ಪ್ರಕ್ರಿಯೆ ಮುಗಿಸಿದ್ದಾರೆ.


ಈ ಸಂದರ್ಭದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಪ್ರಕಾಶ್ ಕುದುರಿ, ತಹಶೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸತ್ಯದೀಪ್ ಸೇರಿದಂತೆ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾಡಳಿತದ ಶ್ಲಾಘನೆ: ಅಧಿಕಾರಿಗಳ ಕರ್ತವ್ಯನಿಷ್ಠೆ, ಸಮಯಪಾಲನೆ, ಪರಿಶ್ರಮ ಮತ್ತು ಕಾರ್ಯಕ್ಷಮತೆ ಅತ್ಯಂತ ಶ್ಲಾಘನೀಯವಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಜವಾಬ್ದಾರಿ ಹಾಗೂ ಸಮರ್ಪಣಾ ಮನೋಭಾವದಿಂದ ಸಮಯೋಚಿತವಾಗಿ ಅನುಷ್ಠಾನಗೊಳಿಸಿದ ನಿಮ್ಮ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳ ಅಮೂಲ್ಯ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿ, ಮುಂದಿನ ಕಾರ್ಯಗಳಿಗೂ ಶುಭ ಹಾರೈಸಿದ್ದಾರೆ.