- ಟ್ರೈನರ್ ಇಸ್ಮಾಯಿಲ್ ವಿರುದ್ಧ ಸುಮೋಟೋ ಕೇಸ್‌ಗೆ ಒತ್ತಾಯ

- ರಾಜ್ಯ ಮಹಿಳಾ ಆಯೋಗ ಏನು ಮಾಡುತ್ತಿದೆ ಎಂದು ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೂ ಮಹಿಳೆಯರು, ಯುವತಿಯರನ್ನೇ ಟಾರ್ಗೆಟ್ ಮಾಡಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವ ಜಿಮ್ ಮಾಲೀಕ, ಟ್ರೈನರ್‌ ವಿರುದ್ಧ ಪ್ರಕರಣ ದಾಖಲಿಸಿ, ಗಡೀಪಾರು ಮಾಡುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಪರ ಸಂಘಟನೆಗಳು ನಗರದ ಸರಸ್ವತಿ ಬಡಾವಣೆಯ ಪವರ್ ಫಿಟ್ನೆಸ್‌ ಕ್ಲಬ್ ಎದುರು ಶುಕ್ರವಾರ ಪ್ರತಿಭಟಿಸಿದರು.

ನಗರದ ಸರಸ್ವತಿ ಬಡಾವಣೆಯಲ್ಲಿ ಇಸ್ಮಾಯಿಲ್ ಎಂಬ ವ್ಯಕ್ತಿಗೆ ಸೇರಿದ ಪವರ್ ಫಿಟ್ನೆಸ್ ಕ್ಲಬ್ ಎದುರು ಶ್ರೀರಾಮ ಸೇನೆಯ ಮಣಿಕಂಠ ಸರ್ಕಾರ್‌, ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟಿಸಿ, ಕ್ಲಬ್‌ನ ಫ್ಲೆಕ್ಸ್ ಹರಿದು ಹಾಕಿ, ಸುಟ್ಟು ಹಾಕುವ ಮೂಲಕ ಲವ್ ಜಿಹಾದ್ ಮಾಡುತ್ತಿರುವ ಇಸ್ಮಾಯಿಲ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.


ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಇಸ್ಮಾಯಿಲ್ ಎಂಬಾತನ ಫಿಟ್ನೆಸ್ ಸೆಂಟರ್ ಇದಾಗಿದ್ದು, ಇಲ್ಲಿಗೆ ಬರುವ ಹಿಂದೂ ಹೆಣ್ಣು ಮಕ್ಕಳನ್ನು ಎಗ್ಗಿಲ್ಲದೇ ತನಗೆ ಮನಬಂದಂತೆ ಅಂತಹವರ ಖಾಸಗಿ ವೀಡಿಯೋ ಇಟ್ಟುಕೊಂಡು, ಬ್ಲ್ಯಾಕ್ ಮೇಲ್ ಮಾಡಿ, ಜಿಮ್ ನಡೆಸುತ್ತಿದ್ದಾರೆ. ಇಂತಹವನ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಇಸ್ಮಾಯಿಲ್‌ನನ್ನು ತಕ್ಷಣವೇ ಬಂಧಿಸಿ, ಜಿಲ್ಲೆಯಿಂದಲೇ ಆತನನ್ನು ಗಡೀಪಾರು ಮಾಡಬೇಕು. ಆತನ ಫಿಟ್ನೆಸ್ ಸೆಂಟರ್‌ನಲ್ಲಿ ಸಿಕ್ಕ ಸಿಸಿ ಕ್ಯಾಮೆರಾ ಹಾರ್ಡ್‌ ಡಿಸ್ಕ್, ಆತನ ಮೊಬೈಲ್‌ಗಳಲ್ಲಿ ಸೆರೆಯಾದ ದೃಶ್ಯಗಳನ್ನು ಇಟ್ಟುಕೊಂಡು, ಫಿಟ್ನೆಸ್ ಸೆಂಟರ್‌ಗೆ ಬರುತ್ತಿದ್ದ ಯುವತಿಯರು, ಹೆಣ್ಣುಮಕ್ಕಳ ಖಾಸಗಿ ವೀಡಿಯೋ ಮಾಡಿಕೊಂಡು, ಆತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇಂತಹ ನೀಚ ಮನಸ್ಥಿತಿಯವನ ವಿರುದ್ಧ ಇಲಾಖೆ ಮೊದಲು ಕ್ರಮ ಕೈಗೊಳ್ಳಲಿ ಎಂದು ತಾಕೀತು ಮಾಡಿದರು.

ಹಿಂದೂ ಯುವತಿಯರು, ವಿದ್ಯಾರ್ಥಿನಿಯರು, ಗೃಹಿಣಿಯರನ್ನೇ ಗುರಿಯಾಗಿಸಿಕೊಂಡು, ಸಲುಗೆ ಬೆಳೆಸಿ ಅಶ್ಲೀಲ ಫೋಟೋ, ವೀಡಿಯೋ ಮಾಡಿಕೊಂಡು ಇಸ್ಮಾಯಿಲ್‌ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈತನ ಬ್ಲ್ಯಾಕ್‌ಮೇಲ್‌ನಿಂದಾಗಿ ಮನನೊಂದ ವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವಾರು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರಿಗೆ ತನ್ನ ನಿಜವಾದ ಹೆಸರು ಇಸ್ಮಾಯಿಲ್ ಎಂಬುದನ್ನು, ತನ್ನ ಧರ್ಮವನ್ನು ಮರೆ ಮಾಡಿ, ಹಿಂದೂಗಳ ವಿವಿಧ ಹೆಸರು ಹೇಳಿ ಪರಿಚಯಿಸಿಕೊಂಡ ಆರೋಪಿ, ತನ್ನ ನೀಚತನ ಪ್ರದರ್ಶಿಸಿದ್ದಾನೆ ಎಂದು ಆರೋಪಿಸಿದರು.

ತನ್ನ ಹೆಸರು ಆಕಾಶ ಹೀಗೆ ಹಿಂದೂಗಳ ಹೆಸರು ಹೇಳಿಕೊಂಡು, ಸಲಿಗೆ ಬೆಳೆಸಿಕೊಂಡು ಅಮಾಯಕ ಹಿಂದೂ ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡಿದ್ದಾನೆ. ಕೆಟಿಜೆ ನಗರ ಪೊಲೀಸರು ಇಸ್ಮಾಯಿಲ್ ವಿಚಾರಣೆಗೆಂದು ಕರೆಸಿಕೊಂಡಿದ್ದಾರೆ. ಬರೀ ಕರೆಸಿಕೊಂಡರಷ್ಟೇ ಸಾಲದು, ಆತನ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಇಸ್ಮಾಯಿಲ್‌ನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಬೇಕು ಎಂದು ತಾಕೀತು ಮಾಡಿದರು.

- - -

(ಕೋಟ್‌) ಫಿಟ್ನೆಸ್ ಸೆಂಟರ್‌ಗೆ ಬರುತ್ತಿದ್ದ ಹಿಂದೂ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಿಕೊಂಡು, ಅಂತಹವರ ಖಾಸಗಿ ವೀಡಿಯೋ, ಫೋಟೋಗಳನ್ನು ಇಟ್ಟುಕೊಂಡು, ಸೆಂಟರ್ ಮಾಲೀಕ, ಟ್ರೈನರ್ ಇಸ್ಮಾಯಿಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈತನ ಬೆದರಿಕೆಗೆ ಹೆದರಿ 3 ದಿನಗಳ ಹಿಂದೆ ವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮರ್ಯಾದೆಗೆ ಅಂಜಿ ಯಾರೂ ದೂರು ನೀಡುತ್ತಿಲ್ಲ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ, ಕ್ರಮ ಕೈಗೊಳ್ಳಲಿ. ರಾಜ್ಯ ಮಹಿಳಾ ಆಯೋಗ ದಾವಣಗೆರೆ ಲವ್ ಜಿಹಾದ್‌ ಪ್ರಕರಣದ ಕಡೆಗೆ ಗಮನ ಹರಿಸಬೇಕು.

-ಮಣಿಕಂಠ ಸರ್ಕಾರ್, ಶ್ರೀರಾಮ ಸೇನೆ ಮುಖಂಡ.

- - -

(ಟಾಪ್‌ ಕೋಟ್‌)

ಲವ್ ಜಿಹಾದ್ ಬಗ್ಗೆ ನಾವು ಧ್ವನಿ ಎತ್ತಿದರೆ ನಮ್ಮ ವಿರುದ್ಧವೇ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುತ್ತದೆ. ದಾವಣಗೆರೆ ಸರಸ್ವತಿ ಬಡಾವಣೆ ಫಿಟ್ನೆಸ್ ಸೆಂಟರ್‌ನ ಇಸ್ಮಾಯಿಲ್‌ನ ಮೊಬೈಲ್, ಸಿಸಿ ಕ್ಯಾಮೆರಾಗಳಲ್ಲೇ ಆತನ ಕುಕೃತ್ಯ ಸೆರೆಯಾಗಿದ್ದರೂ ಪೊಲೀಸರು ಯಾಕೆ ಸುಮೋಟೋ ಕೇಸ್ ಮಾಡುತ್ತಿಲ್ಲ? ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಹೀಗಾಗಿದೆ. ಅದೇ ಅನ್ಯ ಕೋಮಿನ ಹೆಣ್ಣು ಮಕ್ಕಳ ವಿಚಾರದಲ್ಲಿ ಹೀಗಾಗಿದ್ದರೆ ಏನಾಗಿರುತ್ತಿತ್ತು ಎಂಬುದನ್ನೂ ಪೊಲೀಸ್ ಇಲಾಖೆ ಆಲೋಚಿಸಲಿ. ಇನ್ನೂ ಕಾಲ ಮಿಂಚಿಲ್ಲ. ಇಂತಹ ಲವ್ ಜಿಹಾದಿಗಳ ವಿರುದ್ಧ ಮೊದಲು ಸ್ವಯಂಪ್ರೇರಿತ ದೂರು ದಾಖಲಿಸಿ.

- ಸತೀಶ ಪೂಜಾರಿ, ಹಿಂದೂ ಜಾಗರಣಾ ವೇದಿಕೆ.

- - -

-10ಕೆಡಿವಿಜಿ6: ದಾವಣಗೆರೆ ಸರಸ್ವತಿ ಬಡಾವಣೆಯ ಪವರ್ ಫಿಟ್ನೆಸ್ ಸೆಂಟರ್ ಎದುರು ಶ್ರೀರಾಮ ಸೇನೆ ಮಣಿಕಂಠ ಸರ್ಕಾರ್, ಹಿಂದೂ ಜಾಗರಣಾ ವೇದಿಕೆ ಸತೀಶ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಚ್.ಪಿ.ವಿಶ್ವಾಸ್, ಸಾಗರ್ ಇತರರು ಪ್ರತಿಭಟನೆ ನಡೆಸಿದರು.