ದೇಶದ ೮೪ ಲಕ್ಷ ಜೀವರಾಶಿಗಳಲ್ಲಿ ಬೇರೆ ಯಾವ ಪ್ರಾಣಿಗಳಿಗೂ ಇಂತಹ ಸದ್ಭಾವನೆ, ಸಹಬಾಳ್ವೆ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದರೆ, ಯೋಚನೆ, ವಿವೇಚನಾಶೀಲರಾಗಿರುವ ಮನುಷ್ಯನಿಗೆ ಮಾತ್ರ ಧರ್ಮದ ಉದ್ದೇಶಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಂದೆ ತಾಯಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಾಗದು. ಜೀವಂತವಾಗಿರುವಾಗಲೇ ಅವರನ್ನು ಉತ್ತಮವಾಗಿ ನೋಡಿಕೊಳ್ಳುವುದರ ಮೂಲಕ ಋಣ ಕಡಿಮೆ ಮಾಡಿಕೊಳ್ಳಬೇಕೆಂದು ತೆಂಡೆಕೆರೆ ಮತ್ತು ಗುತ್ತಲು ಜಂಗಮ ಮಠದ ಶ್ರೀ ಗಂಗಾಧರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಸಿದ್ಧಾರ್ಥನಗರದ ನಡೆದ ಆದಿಜಗದ್ಗರು ಶ್ರೀಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ನಾಲ್ಕನೇ ದಿನದ ಶಾಂತಿ ಸೌಹಾರ್ದತೆ ಸಂದೇಶ ನೀಡುವ ಭಾವೈಕ್ಯತಾ ಸದ್ಭಾವನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ೮೪ ಲಕ್ಷ ಜೀವರಾಶಿಗಳಲ್ಲಿ ಬೇರೆ ಯಾವ ಪ್ರಾಣಿಗಳಿಗೂ ಇಂತಹ ಸದ್ಭಾವನೆ, ಸಹಬಾಳ್ವೆ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದರೆ, ಯೋಚನೆ, ವಿವೇಚನಾಶೀಲರಾಗಿರುವ ಮನುಷ್ಯನಿಗೆ ಮಾತ್ರ ಧರ್ಮದ ಉದ್ದೇಶಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ದ್ವೇಷದ ಜ್ವಾಲೆಯಲ್ಲಿ ಬದುಕುತ್ತಿರುವುದು ವಿಪರ್ಯಾಸ. ಮನುಷ್ಯನಾದವನು ವಿದ್ಯಾವಂತ, ಬುದ್ಧಿವಂತ, ಹಣವಂತನಾಗಿ ಬದುಕಿನಲ್ಲಿ ವಿಮುಖನಾಗುತ್ತಿದ್ದಾನೆ ಎಂದು ವಿಷಾದಿಸಿದರು.

ವಿಶೇಷ ಪೂಜೆ:

ಶುಕ್ರವಾರ ಮುಂಜಾನೆ ಸಿದ್ಧಾರ್ಥ ನಗರದ ಪ್ರವೇಶ ದ್ವಾರದಲ್ಲಿರುವ ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯತಾ ಯಾತ್ರೆಯ ಮೆರವಣಿಗೆ ಆರಂಭಿಸಲಾಯಿತು.

ದೇವರ ನಾಡಿನ ಸಾವಿರಾರು ಮಹಿಳೆಯರು ಬೀದಿ ಬೀದಿಯಲ್ಲೂ ನೀರು ಹಾಕಿ ಹಸಿರು ತೋರಣಗಳನ್ನು ಕಟ್ಟಿ ರಂಗೋಲಿ ಬಿಟ್ಟು, ಪುಷ್ಪಗಳನ್ನಿಟ್ಟು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡರು. ಸ್ಥಳೀಯರು ಅದಿಜಗದ್ಗರುಗಳ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ನಾಡಿನಲ್ಲಿ ಭಾವೈಕ್ಯತಾ ಸಂಚಾರ ಮಾಡುತ್ತಿದ್ದಂತೆ ಪ್ರತಿ ಬೀದಿ-ಬೀದಿಯಿಂದ ನೂರಾರು ಮಹಿಳೆಯರು, ವೃದ್ಧರು ಭಕ್ತಿ ಪರವಶರಾಗಿ ಸುತ್ತೂರು ಶ್ರೀಗಳ ಪಾದಕ್ಕೆ ನಮಿಸಿ ಅಶೀರ್ವಾದ ಪಡೆದರು.

ಭಾವ್ಯಕ್ಯತಾ ಯಾತ್ರೆಯಲ್ಲಿನ ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು, ಭಜನೆ ತಂಡ, ವೀರಭದ್ರ, ಪೂಜಾ ಕುಣಿತ, ಸಮಾಜಕ ಸಂದೇಶ ನೀಡುವ ಮಕ್ಕಳಿಂದ ಭಿತ್ತಿಪತ್ರಗಳ ಪ್ರದರ್ಶನ, ಮಂಗಳವಾದ್ಯ, ನೂರಾರು ಮಕ್ಕಳ ಸಾಮೂಹಿಕ ಪ್ರಾರ್ಥನೆ, ತಾಲೂಕಿನ ಹರಗುರು ಚರಮೂರ್ತಿಗಳ ಯಾತ್ರೆ ದೇವರ ನಾಡಿನ ಜನರಿಗೆ ಭಕ್ತಿ ಸಮರ್ಪಣೆಯ ಹೊಸ ಸಂಚಲನ ಮೂಡಿಸಿತು.

ಯಾತ್ರೆಯ ದಿವ್ಯಸಾನಿಧ್ಯ ವಹಿಸಿದ್ದ ಸುತ್ತೂರು ಶ್ರೀಗಳು ದೇವರ ನಾಡಿನ ಶ್ರೀಚೌಡೇಶ್ವರ, ಶ್ರೀಮಹದೇಶ್ವರ, ಶ್ರೀಗುಡ್ಡದಮ್ಮ, ಶ್ರೀಆದಿಶಕ್ತಿ ಹಟ್ಟಿ ಮಾರಮ್ಮ, ಶ್ರೀಲಕ್ಷ್ಮೀದೇವಿ, ಶ್ರೀಪಾರ್ವತಿ, ಬಸವನ, ಶ್ರೀಬದನಾಳೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಶ್ರೀಗಳಿಗೆ ಮಹಾಮಂಗಳಾರತಿ ನೀಡಿ ಅಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ತೋಟಹಳ್ಳಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿ, ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ತಾಲೂಕಿನ ಹರಗುರು ಚರಮೂರ್ತಿ, ದೇವರ ನಾಡಿನ ನೂರಾರು ಮುಖಂಡರು ಸಾವಿರಾರು ಭಕ್ತ ವೃಂದವರು ಭಾಗವಹಿಸಿದ್ದರು.