ಕನ್ನಡಪ್ರಭ ವಾರ್ತೆ ಪಾಂಡವಪುರ

ನಾಡಪ್ರಭ ಕೆಂಪೇಗೌಡರು ಸೇರಿದಂತೆ ವಿಶ್ವದ ಮಹಾನ್ ನಾಯಕರನ್ನು ನಾವುಗಳು ಒಂದು ಜಾತಿಗೆ ಸೇಮಿತಗೊಳಿಸಬಾರದು ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ, ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ಬೃಹತ್ ಆಕಾರದಲ್ಲಿ ಬೆಳೆದು ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ. ದೇಶದಲ್ಲಿಯೇ ಅತ್ಯಂತ ಸುರಕ್ಷಿತ ನಗರವಾಗಿ ಬೆಳೆದಿದೆ ಎಂದರು.

ಎಲ್ಲಾ ವರ್ಗದ ಜನರು, ಶ್ರಮಿಕರು ಉತ್ಪಾದಿಸುವ ವಸ್ತುಗಳನ್ನು ವ್ಯಾಪಾರಕ್ಕೆ ಅನುಕೂಲವಾಗಲು, ಜನರು ನೆಮ್ಮದಿ ಜೀವನ ನಡೆಸಬೇಕು ಎಂಬು ಉದ್ದೇಶದಿಂದ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು. ಜನರಿಗೆ ಕುಡಿಯುವ ನೀರು ಬೇಸಾಯ ಮಾಡಲು ಅನುಕೂಲವಾಗುವ ಉದ್ದೇಶದಿಂದ ಸಾವಿರಾರು ಕೆರೆಗಳು, ದೇವಾಯಲಗಳನ್ನು ನಿರ್ಮಾಣ ಮಾಡಿದರು. ಭೂಮಿ ಮೇಲೆ ಸೂರ್ಯಚಂದ್ರು ಇರುವ ತನಕ ನಾಡಪ್ರಭುಗಳ ಹೆಸರು ಅಜಾರಾಮಜವಾಗಿ ಉಳಿಯುತ್ತದೆ ಎಂದು ಬಣ್ಣಿಸಿದರು.

ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲರಿಗೂ ಆದರ್ಶವಾಗಿದ್ದು, ಅವರು ದೂರುದೃಷ್ಠಿ ಇಟ್ಟುಕೊಂಡಿದ್ದರು. ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.


ಬೆಂಗಳೂರಿನಲ್ಲಿ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಆದರೆ, ಇಂದು ಎಲ್ಲವೂ ಕಣ್ಮರೆಯಾಗಿವೆ. ಮಳೆಗೆ ನಾವು ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾದರೆ ಹಿಂದಿನ ನೀರಾವರಿ ಮೂಲವನ್ನು ಮತ್ತೆ ಸೃಷ್ಟಿಸಿಕೊಳ್ಳಬೇಕಾಗಿದೆ ಎಂದರು.

ಈ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಪ್ರೇಮಿ ಅಂಕೇಗೌಡ, ತಹಸೀಲ್ದಾರ್ ಪ್ರಭ, ಇಒ ವೀಣಾ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಯೋಗೇಶ್, ಸಿ.ಆರ್.ರಮೇಶ್, ದಯಾನಂದ್, ದೀಪು, ರಾಮಚಂದ್ರು, ಮನು, ಟಿಎಚ್‌ಒ ಅರವಿಂದ್, ಬಿ.ಜೆ.ಸ್ವಾಮಿ, ಕಣಿವೆರಾಮು, ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಅಂಕಯ್ಯ, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಸೇರಿದಂತೆ ಹಲವರು ಇದ್ದರು.