ಕನ್ನಡಪ್ರಭ ವಾರ್ತೆ ಬೆಂಗಳೂರು:
ಸುಳ್ಳು ಸುದ್ದಿಗಳಿಂದ ಸಂಬಂಧಿಸಿದವರ ಘನತೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಸತ್ಯವನ್ನೇ ಪ್ರಸಾರ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.ವಾರ್ತಾ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸತ್ಯಕ್ಕೆ ಗೌರವ ನೀಡುವುದು ಪತ್ರಿಕೋದ್ಯಮದ ಮೊದಲ ಕರ್ತವ್ಯ. ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮದ ಮೇಲಿರುವ ಗೌರವಕ್ಕೆ ಧಕ್ಕೆ ಆಗುತ್ತದೆ. ಸುಳ್ಳು ಸುದ್ದಿ ಪ್ರಕಟ ಮಾಡುವುದು ವೈರಸ್‌ನಂತಾಗಿದೆ. ಸುಳ್ಳು ಸುದ್ದಿಯಿಂದ ಸಂಬಂಧಿಸಿದವರ ಘನತೆ, ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ನಾನು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಹೋಗಿದ್ದೆ. ಆದರೆ, ದಾಖಲಾಗಿದ್ದೇನೆ ಎಂದು ಕೆಲ ಟೀವಿ ವಾಹಿನಿಗಳು ಪ್ರಸಾರ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕುಡಿದಂತೆ ಪ್ರಸಾರ:
ಮೇಕೆದಾಟು ಪಾದಯಾತ್ರೆ ವೇಳೆ ನಾನು ನಿತ್ರಾಣಗೊಂಡಿದ್ದು, ಕಾರ್ಯಕರ್ತರ ತಳ್ಳಾಟದಲ್ಲಿ ತೊಂದರೆ ಉಂಟಾಗಿತ್ತು. ಆದರೆ ಇದನ್ನು ‘ಕುಡಿದು ನಡೆದುಕೊಂಡು ಬರುತ್ತಿದ್ದಾರೆ’ ಎಂಬಂತೆ ಪ್ರಸಾರ ಮಾಡಲಾಗಿತ್ತು. ಈಗಲೂ ಅದನ್ನು ಆಗಾಗ್ಗೆ ಪ್ರಸಾರ ಮಾಡಲಾಗುತ್ತದೆ. ನಾನು ತಪ್ಪು ಮಾಡಿದರೆ ಅದನ್ನು ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಕಿವಿಮಾತು ಹೇಳಿದರು.
ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರದ್ದಾಗಿರುತ್ತದೆ. ಪ್ರಕಟವಾದ ನಂತರ ಅದು ಸಮಾಜದ ಆಸ್ತಿಯಾಗುತ್ತದೆ. ಆದ್ದರಿಂದ ಪ್ರತಿಯೊಂದು ಸುದ್ದಿಯಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು. ಅವಿವಾಹಿತನಾಗಿದ್ದಾಗಲೇ ನಾನು ಸಚಿವನಾಗಿದ್ದವನು. ಚಿಕ್ಕ ವಯಸ್ಸಿನಲ್ಲೇ ಹಣ, ಅಧಿಕಾರ ಇದೆ. ಎಚ್ಚರದಿಂದ ಇರಿ ಎಂದು ಹಿರಿಯರು, ಗುರುಗಳು ಈ ಹಿಂದೆಯೇ ನನಗೆ ಸಲಹೆ ನೀಡಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ನೆನಪಿಸಿಕೊಂಡರು.
ಗಾಂಧೀಜಿಯವರ ತತ್ವ, ಆದರ್ಶಗಳನ್ನು ನೆನಪಿನಲ್ಲಿಟ್ಟುಕೊಂಡು ನಾವು ಕಾರ್ಯನಿರ್ವಹಿಸಬೇಕು. ಬೆಳಗ್ಗೆ ಎದ್ದ ತಕ್ಷಣ ಮೂರ್ನಾಲ್ಕು ಪತ್ರಿಕೆಗಳ ಹೆಡ್‌ಲೈನ್ ಓದದಿದ್ದರೆ ನನಗೆ ಸಮಾಧಾನ ಆಗುವುದಿಲ್ಲ. ಸತ್ಯವನ್ನು ಪ್ರಸಾರ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡುವ ಗುರುತರ ಜವಾಬ್ದಾರಿ ನಿಮ್ಮದಾಗಿದೆ. ಕೃತಕ ಬುದ್ಧಿಮತ್ತೆಯನ್ನೂ ಮಾಧ್ಯಮಗಳು ಬಳಸಿಕೊಳ್ಳುತ್ತಿದ್ದು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ವಾರ್ತಾ ಇಲಾಖೆ ಆಯುಕ್ತ ಅನುಚೇತ್, ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಆರ್.ಪೂರ್ಣಿಮಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನುಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮತ್ತಿತರರು ಉಪಸ್ಥಿತರಿದ್ದರು.
ಆಕರ್ಷಣೀಯ ಸುದ್ದಿಗಳಿಗೇ ಪ್ರಾಧಾನ್ಯತೆ:ಮಾನವೀಯತೆಯ ಸುದ್ದಿಗಳಿಗೆ ಮಾಧ್ಯಮಗಳು ಪ್ರಾಧಾನ್ಯತೆ ನೀಡಬೇಕು. ಆದರೆ ಆಕರ್ಷಣೀಯ ಸುದ್ದಿಗಳೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿವೆ ಎಮದು ಮಾಜಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಮಾಧ್ಯಮ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಮಹಾತ್ಮಾ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದವರು ಈ ವೃತ್ತಿಯಿಂದಲೇ ಬಂದು ಜನರ, ದೇಶದ ಸೇವೆ ಮಾಡಿದವರು. ಮಾಧ್ಯಮವು, ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿದೆ. ಮಾಧ್ಯಮಗಳು ಆಕರ್ಷಣೀಯ ಸುದ್ದಿಗಳಿಗಿಂತ ಮಾನವೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು.