ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಚಿತ್ರರಂಗ ಉಳಿವಿಗಾಗಿ ಸಮಗ್ರ ಹೊಸ ಚಲನಚಿತ್ರ ನೀತಿ, ಚಲನಚಿತ್ರ ಪ್ರಾಚ್ಯಾಗಾರ (ಆರ್ಕೈವ್) ಸಹಾಯಧನ ಹೆಚ್ಚಳ, ಸರ್ಕಾರದಿಂದ ಓಟಿಟಿ ವೇದಿಕೆ, ಏಕಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ವಿಶೇಷ ನೆರವು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿದೆ.ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲ ನೇತೃತ್ವದ ನಿಯೋಗ ಮಂಗಳವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿತು
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ತಿಳಿಸಿದರು. ಹೊಸ ಚಲನಚಿತ್ರ ನೀತಿ ತರಲು ಚರ್ಚೆ, ಸಹಾಯಧನ ಹೆಚ್ಚಳ, ಪ್ರಾಚ್ಯಾಗಾರ ಆರಂಭಿಸಲು ಈ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭಿಸಿಲು ಸೂಕ್ತ ಕ್ರಮ, ಚಿತ್ರನಗರಿ ನಿರ್ಮಾಣಕ್ಕೆ ಘೋಷಣೆ ಮಾಡಿರುವ ಅನುದಾನ ಬಿಡುಗಡೆಯ ಬಗ್ಗೆ ಹಣಕಾಸು ಇಲಾಖೆಯ ಎಸಿಎಸ್ ಅವರನ್ನು ಉಲ್ಲೇಖಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.ಬಿಡಿಎಯಿಂದ 5 ಎಕರೆ ಭೂಮಿ ನೀಡುವ ಕುರಿತು, ಯಾವ ರೀತಿಯಲ್ಲಿ ಸರ್ಕಾರ ಸಹಾಯ ಮಾಡಬಹುದು ಎನ್ನುವ ಬಗ್ಗೆ ತಿಳಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.
ಮನವಿಯ ಪ್ರಮುಖ ಅಂಶಗಳು:
ಹೊಸ ಚಲನಚಿತ್ರ ನೀತಿಯಲ್ಲಿ ಓಟಿಟಿ ಮತ್ತು ಡಿಜಿಟಲ್ ವಿತರಣಾ ವ್ಯವಸ್ಥೆ, ಎಐ ಮತ್ತು ಹೊಸ ತಂತ್ರಜ್ಞಾನ ಬಳಕೆ, ಕನ್ನಡ ಚಿತ್ರರಂಗ ರಕ್ಷಣೆ, ಸಣ್ಣ ಚಿತ್ರಗಳಿಗೆ ಪ್ರೋತ್ಸಾಹ, ಚಿತ್ರಮಂದಿರಗಳ ಉಳಿವು, ಕಲಾವಿದರು ಮತ್ತು ಕಾರ್ಮಿಕರ ಕಲ್ಯಾಣ, ಚಲನಚಿತ್ರ ಶಿಕ್ಷಣ ಮತ್ತು ಆಕ್ರೈವ್, ಜಾಗತಿಕ ಮಾರುಕಟ್ಟೆ ವಿಸ್ತರಣೆ ಬಗ್ಗೆ ಬದಲಾವಣೆ ತರಬೇಕು.
ಅನೇಕ ಓಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪನಿಗಳಾಗಿರುವ ಕಾರಣಕ್ಕೆ ಸಣ್ಣ ಮೊತ್ತದ ಸಿನಿಮಾಗಳು ಎಂದು ಖರೀದಿ ಮಾಡುತ್ತಿಲ್ಲ. ಆದ್ದರಿಂದ ಸರ್ಕಾರದಿಂದಲೇ ಸರ್ಕಾರಿ ಓಟಿಟಿ ವೇದಿಕೆ ಪ್ರಾರಂಭಿಸಬೇಕು. ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಚಿತ್ರಮಂದಿರಗಳ ಲೈಸೆನ್ಸ್ ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ತರಬೇಕು. ಅನೇಕ ನಿಯಮಗಳು ಸೆಲ್ಯುಲಾಯ್ಡ್ ಕಾಲಕ್ಕೆ ಹೊಂದಿಕೆಯಾಗುವಂತಿದ್ದು ಡಿಜಿಟಲ್ ಯುಗಕ್ಕೆ ಅನ್ವಯವಾಗುವಂತೆ ಷರತ್ತು ರೂಪಿಸಬೇಕು. ಹೊಸ ಬಡಾವಣೆ, ಗ್ರಾಮೀಣ ಪ್ರದೇಶದಲ್ಲಿ ಹೊಸ ಚಿತ್ರಮಂದಿರ ನಿರ್ಮಿಸಲು ವಿಶೇಷ ಪ್ರೋತ್ಸಾಹ, ತೆರಿಗೆ, ಮೂಲಸೌಕರ್ಯ ವ್ಯವಸ್ಥೆ ಮಾಡಬೇಕು. ಹಳೆಯ ಏಕ ಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ನೆರವಿನ ಜೊತೆಗೆ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುವ ವ್ಯವಸ್ಥೆ ಮಾಡಬೇಕು.2025-26 ರಲ್ಲಿ ಸರ್ಕಾರ ಚಲನಚಿತ್ರಗಳ ಆಕ್ರೈವಿಂಗ್ ಕಾರ್ಯಕ್ಕೆ ಮೂರು ಕೋಟಿ ಹಣ ಘೋಷಣೆ ಮಾಡಿತ್ತಾದರೂ ಈ ಬಗ್ಗೆ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. 1934 ರಿಂದ 2010ರ ವರೆಗೆ ಸೆಲ್ಯುಲಾಲ್ಡ್‌ನಲ್ಲಿ ಚಿತ್ರೀಕರಣಗೊಂಡ ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಇದರಲ್ಲಿ ಅನೇಕ ಅಪರೂಪದ ಚಿತ್ರಗಳು ಹಾಳಾಗುತ್ತಿವೆ. ಹಾಗಾಗಿ ಈ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಬೇಕು.
2022ರಿಂದ ಬಾಕಿ ಉಳಿದಿರುವ ಎಲ್ಲ ರಾಜ್ಯ ಪ್ರಶಸ್ತಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಪ್ರತಿ ವರ್ಷ ನಿಯಮಿತವಾಗಿ ಪ್ರಶಸ್ತಿ ನೀಡಬೇಕು. ಏ. 24ರಂದು ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಪ್ರಶಸ್ತಿ ವಿತರಿಸಬೇಕು. ಮೈಸೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಚಿತ್ರ ನಗರಿಗೆ ಶಂಕುಸ್ಥಾಪನೆ ನೆರವೇರಿಸಿ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಚಲನಚಿತ್ರಗಳಿಗೆ ನೀಡುವ 10 ಲಕ್ಷ ಸಹಾಯಧನ ಮೊತ್ತ ಹೆಚ್ಚಿಸಬೇಕು.ಹೊಂಬಾಳೆ ಫಿಲಂಸ್ ಸಂಸ್ಥೆ ಕಡಿಮೆ ದರದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕ ಸದಸ್ಯರುಗಳಿಗೆ ವಸತಿ ಫ್ಲಾಟ್‌ಗಳನ್ನು ನಿರ್ಮಿಸಿಕೊಡಲಿದ್ದಾರೆ. ಅದಕ್ಕಾಗಿ ಬಿಡಿಎ ವತಿಯಿಂದ ಐದು ಎಕರೆ ಭೂಮಿ ಮಂಜೂರು ಮಾಡಿ ಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.