ಕನ್ನಡಪ್ರಭ ವಾರ್ತೆ ಹುಕ್ಕೇರಿ

ಮಗುವಿನ ರಕ್ಷಣೆಯ ವಿಷಯದಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು. ಈ ನಿಟ್ಟಿನಲ್ಲಿ ಪೋಲಿಯೋ ಮುಕ್ತ ಭಾರತಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ ಹೇಳಿದರು.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರವಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ನಿಮಿತ್ತ ಆಯೋಜಿಸಿದ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಭಾರತದ ಯಶಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪೋಲಿಯೋ ಅಭಿಯಾನವನ್ನು ಹುಕ್ಕೇರಿ ತಾಲೂಕಿನಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ತಾಲೂಕಿನ 43546 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಹಾಗಾಗಿ ಈ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಶ್ರಮಿಸಿ ತಾಲೂಕಿನಲ್ಲಿ ಶೇ. 100 ರಷ್ಟು ಗುರಿ ತಲುಪಬೇಕು. ಇದಕ್ಕೆ ತಾಲೂಕಿನ ಎಲ್ಲ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು ಹೇಳಿದರು.ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಬಿ.ವಿನ್.ಪೈಸ್, ಸಿಡಿಪಿಒ ಎಚ್.ಹೊಳೆಪ್ಪ, ಮುಖ್ಯ ವೈದ್ಯಾಧಿಕಾರಿ ಡಾ.ಶಾಮಲಾ ಪೂಜಾರಿ, ಡಾ.ಸಂತೋಷ ಕೊಣ್ಣೂರ, ಡಾ.ದೀಪಕ ಅಂಬಲಿ, ಡಾ.ಸುರೇಶ ಹಿತ್ತಲಮನಿ, ಆರ್.ಕೆ.ನಾಯಿಕ, ನವೀನ ಬಾಯನಾಯಿಕ, ಸೋಮೇಶ ಅರೆಬೆಂಚಿ ಮತ್ತಿತರರು ಉಪಸ್ಥಿತರಿದ್ದರು.