ಕನ್ನಡಪ್ರಭ ವಾರ್ತೆ ಪಾವಗಡ ಕುಡಿಯುವ ನೀರಿನ ಸಮಸ್ಯೆ ಹಾಗೂ ಇತರೆ ಸಾರ್ವಜನಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಗೆ ಅಲೆಸದೇ ಕೆಲಸ ಮಾಡಿಕೊಡುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷರಾದ ಎಚ್.ವಿ.ವೆಂಕಟೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತಿ ವಾರದಂತೆ ತಾಲೂಕು ಆಡಳಿತ ವತಿಯಿಂದ ಸೋಮವಾರ ಪಟ್ಟಣದ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ 83ಕ್ಕಿಂತ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಶಾಸಕ ಎಚ್.ವಿ.ವೆಂಕಟೇಶ್ ಅವರು ಮಾತನಾಡಿ, ಗಡಿ ಭಾಗದ ತಾಲೂಕು ಪ್ರಗತಿ ಕಾಣಬೇಕು. ಕ್ಷೇತ್ರದ ಜನತೆಯ ಹಿತದೃಷ್ಟಿ ಮುಖ್ಯವಾಗಿದೆ. ಜನಪರ ಸಮಸ್ಯೆ ನಿವಾರಣೆ ಸೇರಿದಂತೆ ಪ್ರಗತಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು. ಜನಸಾಮಾನ್ಯರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ವಿನಾಕಾರಣ ಇಲಾಖೆಗಳಿಗೆ ಅಲೆಸದೇ ನಿಯಮನುಸಾರ ಸ್ಥಳದಲ್ಲಿಯೇ ಇತ್ಯಾರ್ಥಗೊಳಿಸಬೇಕು. ಆ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ವಸತಿ ಶಾಲೆ, ಸರ್ಕಾರಿ ಜಮೀನು ವಸತಿ ಇತರೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಯಿತು.ಜನಸೇವೆಯೆ ಜನಾರ್ಧನ ಸೇವೆ ಎಂಬ ನಿಲುವಿನೊಂದಿಗೆ ಕೆಲಸ ಮಾಡುತ್ತಿದ್ದು ಶಾಸಕರಾದ ಬಳಿಕ ಅನೇಕ ಪ್ರಗತಿ ಕಾರ್ಯಕೈಗೊಳ್ಳಲಾಗಿದೆ ಗ್ರಾಮೀಣ ರಸ್ತೆಗಳ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ರೀತಿಯ ಮೂಲಭೂತ ಸಮಸ್ಯೆಯ ನಿವಾರಣೆಗೆ ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ. ರೈತ ಹಾಗೂ ಜನಸಾಮಾನ್ಯರಿಗೆ ಮೀಸಲಿದ್ದ ಸರ್ಕಾರಿ ಸೌಲಭ್ಯ ಸದ್ಬಳಿಕೆ ಆಗಬೇಕು. ಅರ್ಹರಿಗೆ ಯೋಜನೆ ಸೌಲಭ್ಯ ಸಿಗಬೇಕು. ಬಿತ್ತನೆ ಬೀಜಕ್ಕಾಗಿ ಸಹಾಯಧನದಲ್ಲಿ ಶೇಂಗಾ ಇತರೆ ಎಣ್ಣೆ ಕಾಳು ಬೀಜ ವಿತರಣೆ ನಡೆಯುತ್ತಿದ್ದು ಈಗಾಗಲೇ ಅನೇಕ ಗ್ರಾಮಗಳಲ್ಲಿ ರೈತರಿಗೆ ಬಿತ್ತನೆ ಕಾರ್ಯಕ್ಕೆ ಉಚಿತ ಶೇಂಗಾ ಬೀಜ ವಿತರಿಸಲಾಗುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಅಭಾವವಿರುವ ಗ್ರಾಮಗಳ ವಿವರ ಪಡೆದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಹೀಗಿದ್ದರೂ ಕೆಲ ವಿರೋಧಿಗಳು ವಿನಾ ಕಾರಣ ಟೀಕೆ ಮಾಡಲು ಮುಂದಾಗಿದ್ದಾರೆ. ಅವರಿಗೆ ಯಾವುದೇ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ. ನನ್ನ ಕೆಸಲಗಳೇ ನನ್ನ ವಿರೋಧಿಗಳಿಗೆ ಉತ್ತರ ನೀಡುತ್ತಿದ್ದು ನಾನು ಅಭಿವೃದ್ಧಿ ಮಾಡುವತ್ತ ಮಾತ್ರ ಗಮನ ಹರಿಸಿರುವೆ. ಅಭಿವೃದ್ಧಿಯೇ ನನ್ನ ಮೂಲ ಧ್ಯೇಯ ಎಂದರು.
ಈ ವೇಳೆ ತಹಸೀಲ್ದಾರ್ ವೈ.ರವಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ಪೊಲೀಸ್ ಇನ್ಸಪೆಕ್ಟರ್ ಗಳಾದ ಸುರೇಶ್ ಗೌಡ, ಕೊಟ್ರೇಶ್ , ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.