ದೊಡ್ಡಬಳ್ಳಾಪುರ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ಸೇರಿದಂತೆ ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಈ ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆ ನೀಡಬೇಕು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಆಗ್ರಹಿಸಿದರು.

ಬೆಂ.ಗ್ರಾ ಜಿಲ್ಲಾ ಕಾಂಗ್ರೆಸ್‌ ಹಾಗೂ ವಿವಿಧ ಘಟಕಗಳ ನೇತೃತ್ವದಲ್ಲಿ ಸೋಮವಾರ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ "ಛಾತ್ರೋಂ ಕೀ ಗೂಂಜ್‌ " - "ವಿದ್ಯಾರ್ಥಿಗಳ ಪ್ರತಿಧ್ವನಿ " ರಾಷ್ಟ್ರವ್ಯಾಪಿ ಹೋರಾಟದ ಅಂಗವಾಗಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನಂತರದ ಬೆಳವಣಿಗೆಗಳಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡನೀಯ. ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಹೊಣೆಗೇಡಿತನ ಅಕ್ಷಮ್ಯ. ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಪರೀಕ್ಷೆಗೆ ನೋಂದಾಯಿಸಿದ್ದ 37 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತಮ ಭವಿಷ್ಯದ ಕನಸು ಹೊತ್ತು, ವೈದ್ಯರಾಗುವ ಹೆಬ್ಬಯಕೆಯಿಂದ ಪರೀಕ್ಷೆಗೆ ತಯಾರಿ ನಡೆಸಿದ್ದ ಈ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿಷೇಧಿಸಿ:

ದೊಡ್ಡಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಬಿ.ಆರ್.ನಾಯ್ಡು ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ಮತ್ತು ಅಧಿಕಾರಿಗಳೊಂದಿಗೆ ಇರುವ ಸಂಬಂಧದ ತನಿಖೆಗಾಗಿ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆ ನೀಡಬೇಕು. ಪರೀಕ್ಷೆಗಳನ್ನು ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್‌ಟಿಎ ಮೇಲೆ ನಿಷೇಧ ಹೇರಬೇಕು. ಇಡೀ ಪರೀಕ್ಷೆ ವ್ಯವಸ್ಥೆಯ ಸಮಗ್ರ ಪರಿಶೀಲನೆ ಆಗಬೇಕು . ಪ್ರತಿಯೊಂದು ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳ ಮುಂಚಿತವಾಗಿ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿ ಪಾರದರ್ಶಕ ಪ್ರಕ್ರಿಯೆಗಳನ್ನು ರೂಪಿಸಬೇಕು ಮತ್ತು ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿಗಳೇ ಅಕ್ರಮದ ಬಗ್ಗೆ ದನಿಯೆತ್ತಿ:


ಬೆಂ.ಗ್ರಾ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ದೇಶದಲ್ಲಿ ವಿದ್ಯಾರ್ಥಿಗಳ ಕನಸುಗಳನ್ನು ವಿನಾಶ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಬಡವರು, ಹಿಂದುಳಿದ ವರ್ಗಗಳು ಸೇರಿದಂತೆ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕುವ ಹುನ್ನಾರಗಳು ಖಂಡನೀಯ. ನೀಟ್‌ ಪರೀಕ್ಷೆಯಂತಹ ಸೂಕ್ಷ್ಮ ಮತ್ತು ಮಹತ್ವದ ಪರೀಕ್ಷಾ ಪ್ರಕ್ರಿಯೆಯಲ್ಲಿ ಬೇಜವಾಬ್ದಾರಿತನ ಪದೇ ಪದೇ ಪ್ರದರ್ಶಿತವಾಗುತ್ತಿರುವುದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಗ್ಗೆ ಪ್ರಧಾನಿಯವರಾಗಲೀ, ಸಚಿವರಾಗಲೀ ಮಾತನಾಡುವುದಿಲ್ಲ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸುವ ಪ್ರಧಾನಿ, ಪರೀಕ್ಷಾ ಅಕ್ರಮಗಳ ಬಗ್ಗೆ ಮೌನ ವಹಿಸುವುದು ಪ್ರಶ್ನಾರ್ಹ ಎಂದು ಆರೋಪಿಸಿದರು.

ಬೆಂ.ಗ್ರಾ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ.ಆರ್.ಗೌಡ, ಜಾಲತಾಣ ವಿಭಾಗದ ಅಧ್ಯಕ್ಷ ಸಂದೀಪ್‌, ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಬೈರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್‌, ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಚ್.ಎಸ್.ರೇವತಿ, ರುಕ್ಮಿಣಿ, ಮುಖಂಡರಾದ ಜವಾಜಿ ರಾಜೇಶ್‌, ಮುನಿರಾಜು, ಅಂಜನಮೂರ್ತಿ, ನಾಗರತ್ನಮ್ಮ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

29ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳನ್ನು ಖಂಡಿಸಿ ಬೆಂ.ಗ್ರಾ ಜಿಲ್ಲಾ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.