ಉಡುಪಿ ಜಿಲ್ಲೆಯಲ್ಲಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಟಿ ಬಸ್‌ ಮಾಲಕರ ಸಭೆ ನಡೆಸಲಾಯಿತು.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಟಿ ಬಸ್‌ ಮಾಲಕರ ಸಭೆ ನಡೆಸಲಾಯಿತು.

ಎಲ್ಲಾ ಬಸ್ಸುಗಳಿಗೆ ಕಡ್ಡಾಯವಾಗಿ ಬಾಗಲುಗಳನ್ನು ಅಳವಡಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಇದಕ್ಕೆ ಒಪ್ಪಿದ ಬಸ್ಸು ಮಾಲಕರು ಅದಕ್ಕೆ ಸಾಕಷ್ಟು ಸಮಯಾವಕಾಶ ಕೇಳಿದರು.

ಕೆಲವೇ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುತ್ತಿವೆ, ಈ ಸಂದರ್ಭದಲ್ಲಿ ಬಸ್ಸುಗಳಿಗೆ ಬಾಗಿಲು ಅಳವಡಿಸಲು ಬಸ್‌ ಸಂಚಾರ ನಿಲ್ಲಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ಬಾಗಿಲು ಅ‍ಳವಡಿಸುವ ಕೆಲವೇ ಗ್ಯಾರೇಜುಗಳಿವೆ. ಆದ್ದರಿಂದ ಕಾಲಾವಕಾಶ ಬೇಕು ಎಂದು ಬಸ್ಸು ಮಾಲಕರು ಮನವಿ ಮಾಡಿದರು.

ಅದರಂತೆ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಎಲ್ಲಾ ಬಸ್ಸುಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು ಜೂ.1ರವರೆಗೆ ಕಾಲಾವಕಾಶ ನೀಡಿದರು. ಜೂ.1ರೊಳಗೆ ಬಾಗಿಲುಗಳನ್ನು ಅಳವಡಿಸದಿದ್ದರೆ ಅಂತಹ ಬಸ್ಸುಗಳನ್ನು ಜಫ್ತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದ್ದು, ಇದಕ್ಕೆ ಎಲ್ಲಾ ಬಸ್‌ ಮಾಲಕರು ಒಪ್ಪಿದರು.ತಕ್ಷಣದಿಂದ ಜಾರಿಯಾಗುವಂತೆ, ಬಸ್‌ಗಳ ಯೋಗ್ಯತಾ ಪ್ರಮಾಣಪತ್ರ (ಫಿಟ್‌ನೆಸ್ ಸರ್ಟಿಫಿಕೇಟ್)ಗಳನ್ನು ನೀಡುವಾಗ, ಬಸ್ಸಿಗೆ ಬಾಗಿಲುಗಳನ್ನು ಅಡವಡಿಸದಿದ್ದರೆ ಯೋಗ್ಯತಾ ಪ್ರಮಾಣಪತ್ರ ರದ್ದುಪಡಿಸುವ ಷರತ್ತು ಹಾಕಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.108 ಬಸ್ಸು, 56 ಲಾರಿಗಳಿಗೆ ದಂಡ: ಉಡುಪಿ ಜಿಲ್ಲಾ ಪೊಲೀಸರು ಬುಧವಾರ ಜಿಲ್ಲೆಯಲ್ಲಿ ಸಂಚರಿಸುವ ಸುಮಾರು 1100 ಬಸ್ಸುಗಳನ್ನು ಪರಿಶೀಲಿಸಿ, ಪ್ರಯಾಣಿಕರ ಸುರಕ್ಷೆ ಸೇರಿದಂತೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ 108 ಬಸ್ಸುಗಳಿಗೆ ದಂಡ ವಿಧಿಸಿದ್ದಾರೆ.ಮರಳು ಮತ್ತು ಕಲ್ಲುಗಳನ್ನು ಸಾಗಿಸುತ್ತಿದ್ದ 1352 ಲಾರಿ, ಟಿಪ್ಪರ್ ಮತ್ತಿತರ ವಾಹನಗಳನ್ನು ತಪಾಸಣೆ ನಡೆಸಲಾಗಿ, ಓವರ್ ಲೋಡ್ ಮಾಡಿದ್ದ ಮತ್ತು ಸ್ವೀಡ್ ಗವರ್ನರ್ ಅಳವಡಿಸದಿರುವ, ನಿಯಮಗಳನ್ನು ಮೀರಿದ 56 ವಾಹನಗಳಿಗೂ ದಂಡ ವಿಧಿಸಲಾಗಿದೆ.