ಶಶಿಕುಮಾರ ಪತಂಗೆ

ಅಳ್ನಾವರ:

ಪಿತೂರಿ ಹಚ್ಚಿ ಹಿಡಿಬೇಕಂತ್ತಾರೋ ಬಂಟ ರಾಯಣ್ಣಗ,

ಡೋರಿ-ಬೆಣಚಿ ಹಳದಾಗ,

ಕುಲಕಂಟಕರಾಗತಾರೋ ನಮ್ಮವರು ಆವಾಗ,


ಹುಲಿಯೂ ಹುಟ್ಟಿತ್ತೂ ಕಿತ್ತೂರು ನಾಡಾಗ,,,

ಇಂದಿಗೂ ಇಂತಹ ಲಾವಣಿಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಮಹನೀಯರ ಬಗೆಗಿನ ಕತೆಗಳನ್ನು ಸಾರಿ ಹೇಳುತ್ತವೆ. ಅದರಲ್ಲೂ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನನಾಗಿ ಕಾಡಿದ ಸಂಗೊಳ್ಳಿ ರಾಯಣ್ಣನ ಬಗ್ಗೆ ಸಾಕಷ್ಟು ಲಾವಣಿಗಳಿವೆ.

ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಧಾರವಾಡ ಜಿಲ್ಲೆಯ ಅಳ್ನಾವರ ಸಮೀಪದ ಡೋರಿ ಹಳ್ಳದಲ್ಲಿ ಸೆರೆ ಹಿಡಿಯುತ್ತಾರೆ. ಅಂತಹ ಕ್ರಾಂತಿಕಾರಿ ರಾಯಣ್ಣ ಕೊನೆಯದಾಗಿ ಓಡಾಡಿದ ಸ್ಥಳವಿಂದು ಅನಾಥವಾಗಿ ಉಳಿದಿದೆ. ಸಮೀಪದ ಡೋರಿ ಹಳ್ಳದಲ್ಲಿ ಕೇವಲ ಒಂದು ಬಂಡೆಗಲ್ಲು ಬಿಟ್ಟರೆ ಏನೂ ಇಲ್ಲ. ಈ ಒಂದು ಸ್ಥಳಕ್ಕೆ ಹೋಗಲು ದಾರಿಕೂಡ ಲಭ್ಯವಿಲ್ಲ. ಜಿಲ್ಲಾಡಳಿಡಳಿತ ಅಥವಾ ತಾಲೂಕಾಡಳಿತದಿಂದ ಇಲ್ಲಿ ಯಾವುದೇ ಸುವ್ಯವಸ್ಥಿತ ಕಾರ್ಯಗಳಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದ ವೀರನಿಗೆ ಧಾರವಾಡ ಜಿಲ್ಲಾಡಳಿತ ನೀಡಿದ ಗೌರವವಿದು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಡೋರಿ ಹಳ್ಳದಲ್ಲಿ ಸೆರೆ:

ಸಂಗೊಳ್ಳಿ ರಾಯಣ್ಣನು ಬ್ರಿಟಿಷರ ವಿರುದ್ಧ ಗೇರಿಲ್ಲಾ ತಂತ್ರದ ಮೂಲಕ ಯುದ್ಧ ಮಾಡಲು ವಾಸವಾಗುತ್ತಿರುವ ಅಡಗುತಾಣಗಳಲ್ಲಿ ಸಮೀಪದ ಹಂಡಿಬಡಂಗನಾಥ ಸಹ ಒಂದು. ಬಾಳಗುಂದ ಗುಡ್ಡ ಮತ್ತು ಡೋರಿ ಗುಡ್ಡಗಳು ಜತೆಗೆ ಇಲ್ಲಿಯೇ ಇರುವ ಪೂರ್ವದಿಂದ ಪಶ್ಚಿಮದ ಕಡೆಗೆ ಹರಿಯುವ ಹಳ್ಳದಲ್ಲಿ ರಾಯಣ್ಣ ನಿತ್ಯ ಸ್ನಾನ ಮಾಡುತ್ತಿದ್ದನು.

1830ರ ಏಪ್ರಿಲ್‌ 8ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವ ಯೋಜಿತ ಮೋಸದ ಯೋಜನೆಯಂತೆ ಬ್ರಿಟಿಷರು ನಮ್ಮವರನ್ನೇ ಬಳಸಿಕೊಂಡು ಮೋಸದಿಂದ ರಾಯಣ್ಣನನ್ನು ಸೆರೆಹಿಡಿದು ಕೊಡುತ್ತಾರೆ. ಬ್ರಿಟಿಷರ ಕೇಂದ್ರ ಜಿಲ್ಲಾ ಕಚೇರಿ ಧಾರವಾಡದಲ್ಲಿದ್ದು, ಸೈನ್ಯವನ್ನು ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಡೋರಿ ಹಳ್ಳದಲ್ಲಿಯೇ ಸೆರೆ ಹಿಡಿಯಲು ಮುಂದಾಗುತ್ತಾರೆ ಪಿರಂಗಿ ಅಧಿಕಾರಿಗಳು.

ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಲು ರಾಯಣ್ಣನ ಜೊತೆಗಿದ್ದವರನ್ನು ಸಹ ಬ್ರಿಟಿಷರು ಬಂಧಿಸಿ ಧಾರವಾಡದ ಜೈಲಿನಲ್ಲಿ ವಿಚಾರಣೆ ನಡೆಸುತ್ತಾರೆ. ನಂತರ ರಾಯಣ್ಣ ಸೇರಿದಂತೆ ಏಳು ಜನರಿಗೆ ಗಲ್ಲು ಶಿಕ್ಷೆ ಮತ್ತು ಆರು ಜನರಿಗೆ ಗಡಿಪಾರು ಶಿಕ್ಷೆ ನೀಡಲಾಗುತ್ತದೆ.

ಹಿಡಿದುಕೊಟ್ಟವರಿಗೆ ಸಿಕ್ಕಿದೇನು?

ರಾಯಣ್ಣನನ್ನು ಹಿಡಿದು ಕೊಟ್ಟವರಿಗೆ ಕಂಪನಿ ಸರ್ಕಾರವು ₹ 300 ಗೌರವ ಧನ ನೀಡಬೇಕೆಂದು ಘೋಷಿಸುತ್ತದೆ. ಆದರೆ, ಆಗಿನ ಧಾರವಾಡ ಜಿಲ್ಲಾಧಿಕಾರಿಗಳು ಕಂಪನಿಗೆ ಮರು ಪತ್ರ ಬರೆದು, ಹೆಚ್ಚಿನ ಗೌರವಧನಕ್ಕೆ ಒತ್ತಾಯಿಸುತ್ತಾರೆ. ತದನಂತರ ಕಂಪನಿ ಸರ್ಕಾರವು ಖೋದಾನಪೂರ ನಿಂಗನಗೌಡನದ್ದು ಮುಖ್ಯ ಪಾತ್ರವಿದ್ದು, 10 ಸಾವಿರ ಎಕರೆ ಜಮೀನು, ನೇಗಿನಾಳದ ವೆಂಕನಗೌಡರಿಗೆ 1500 ಎಕರೆ ಇನಾಮು ಜಮೀನು ನೀಡುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಚರಿತ್ರೆ ಮತ್ತು ಜಾನಪದ ನೆಲೆ ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ ಲೇಖಕ ಬಸವರಾಜ ಕಮತ್.

ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ನೀಡಿದ ರಾಯಣ್ಣನ ಬ್ರಿಟಿಷರ ಮೋಸದ ಬಲೆಗೆ ಬಿದ್ದ ಡೋರಿ ಹಳ್ಳವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.