ಅಂಕೋಲಾ: ಪ್ರತಿಯೊಂದು ಸಮಾಜದ ಧ್ವನಿಯ ಜತೆ ನನ್ನ ಸಮಾಜದ ಧ್ವನಿಯನ್ನು ಸೇರಿಸಬೇಕು. ಸರ್ಕಾರ ಮತ್ತು ಜನಸಮುದಾಯ ಅಸ್ಪೃಶ್ಯರನ್ನು ಎಂದೂ ಕನಿಷ್ಠವಾಗಿ ಕಾಣಬಾರದು ಎನ್ನುವ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಹಲವು ಕಾರ್ಯಗಳ ಮೂಲಕ ಈ ನಾಡನ್ನು ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು.

ಅವರು ಬಾಸಗೋಡದ ಸ್ವಾತಂತ್ರ್ಯ ಸೇನಾನಿ ಮಾಣಿ ನಾಯಕ ಸ್ಮರಣಾರ್ಥ ಮಣಿ ನಾಯಕ ಅವರ ಮನೆ ಅಂಗಳದಲ್ಲಿ ಹಮ್ಮಿಕೊಂಡ 19ನೇ ವರ್ಷದ ವಿಚಾರ ಸಂಕಿರಣ-ಜಾನಸತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು. ಯಾವ ನಾಡಲ್ಲಿ ನನ್ನ ಸಮುದಾಯದವರಿಗೆ ನೀರನ್ನು ಒಯ್ಯುವುದು ಬಹಿಷ್ಕಾರವಿದೆಯೋ, ಯಾವ ನಾಡಲ್ಲಿ ನನ್ನ ಸಮುದಾಯದವರಿಗೆ ಸರಿಯಾದ ರಸ್ತೆಯ ಬಳಕೆ ಇಲ್ಲವೋ, ಯಾವ ನಾಡಲ್ಲಿ ದೇವಸ್ಥಾನಗಳಿಗೆ ಪ್ರವೇಶ ನಿಷಿದ್ಧವಾಗಿದೆಯೋ ಆ ನಾಡನ್ನು ನನ್ನ ತಾಯಿನಾಡು ಎಂದು ಹೇಗೆ ಹೇಳಲಿ ಎಂದು ಗಾಂಧೀಜಿ ಅವರಿಗೆ ಅಂಬೇಡ್ಕರ್ ಅವರು ಉತ್ತರಿಸಿದ್ದರು. ಸವರ್ಣೀಯರಿಗೆ ಅಂಬೇಡ್ಕರ್ ಓರ್ವ ವಿಭಜಕ ಎನ್ನಿಸಿರಬಹುದು. ಆದರೆ ಅಂಬೇಡ್ಕರ್ ತನ್ನ ತತ್ವ-ಆದರ್ಶಗಳ ಮೂಲಕ ಈ ದೇಶವನ್ನು ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ ಚಿಂತಕ ವಾದಿರಾಜ, ವಿಶ್ವದಲ್ಲಿ ಯಾವ ನೆಲವನ್ನೂ ತಾಯಿ ನೆಲ ಎನ್ನುವುದಿಲ್ಲ. ಭಾರತವನ್ನು ಮಾತ್ರ ತಾಯಿ ನೆಲ ಎನ್ನುತ್ತೇವೆ. ಪುರಾತನ ತತ್ವಜ್ಞಾನ ಒಳಸತ್ವವನ್ನು, ಜ್ಞಾನವನ್ನು ನೀಡುತ್ತದೆ. ಇಲ್ಲಿ ನಾವು ಸ್ತ್ರೀ ಎಂದು ನಂಬಿದ ನದಿ ಮತ್ತು ಹೆಣ್ಣು ಜೀವ ಕೊಡುವ ಶಕ್ತಿಯನ್ನು ಹೊಂದಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇವುಗಳನ್ನು ನಾವು ಸರಿಯಾಗಿ ಅರ್ಥೈಸಿಕೊಂಡು ಬದುಕು ನಡೆಸಬೇಕು. ಸ್ವಾತಂತ್ರ್ಯ ಇಲ್ಲದ ಸಮಾನತೆ, ಸಮಾನತೆ ಇಲ್ಲದ ಸ್ವಾತಂತ್ರ್ಯ ಇದ್ದೂ ಪ್ರಯೋಜನವಿಲ್ಲ. ನಾವೆಲ್ಲರೂ ಜಾತಿ ವೈಷಮ್ಯ ಬಿಟ್ಟು ಒಂದಾಗಿ ಬಾಳಿದಾಗ ನಮ್ಮಲ್ಲಿ ಗಟ್ಟಿತನ ಬರುತ್ತದೆ. ಆ ಸಂದರ್ಭದಲ್ಲಿ ನಮ್ಮನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂದರು.

ವಿಶ್ರಾಂತ ಪ್ರಾಚಾರ್ಯ ದಶರಥ ಮನೋಜ್ ಸನ್ಮಾನ ಸ್ವೀಕರಿಸಿ, ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ ವಿಷಯವಾಗಿ ಅರ್ಥಪೂರ್ಣ ವಿಚಾರಗಳನ್ನು ತೆರೆದಿಟ್ಟರು. ಮಾಣಿ ನಾಯಕ ಅವರ ಮಗ ವೆಂಕಣ್ಣ ನಾಯಕ್ ಉಪಸ್ಥಿತರಿದ್ದರು. ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ ಹಾಗೂ ಸಮಾನತೆ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಸಭಿಕರು ಕೇಳಿದರು. ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಅವರು ಆ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಿದರು. ಆಗಮಿಸಿದ ಸರ್ವರಿಗೂ ಪುಸ್ತಕ ಪ್ರಸಾದ ವಿತರಿಸಲಾಯಿತು.

ನ್ಯಾಯವಾದಿ, ಜ್ಞಾನಸತ್ರದ ಸಂಚಾಲಕ ನಾಗರಾಜ್ ನಾಯಕ್ ಸ್ವಾಗತಿಸಿದರು. ಕಳೆದ 19 ವರ್ಷಗಳಿಂದ ನನ್ನ ಅಜ್ಜ ಸ್ವಾತಂತ್ರ್ಯ ಸೇನಾನಿ ಮಾಣಿ ನಾಯಕ್ ಸ್ಮರಣಾರ್ಥ ಜಾನಸತ್ರ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. 19 ವರ್ಷಗಳಲ್ಲಿಯೂ ಈ ವೇದಿಕೆಯನ್ನು ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಹಂಚಿಕೊಂಡಿದ್ದಾರೆ. ಈ ರೀತಿಯ ಹಲವು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಡೆಯಲಿವೆ ಎಂದು ನಾಗರಾಜ ನಾಯಕ ಹೇಳಿದರು.


ಆನಂದು ಭಾಗವತ ಯಕ್ಷಗಾನ ಶೈಲಿಯ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಶಿಕ್ಷಕ ರಾಜೇಶ್ ನಾಯಕ ಕಾರ್ಯಕ್ರಮ ನಿರೂಪಿಸಿದರು. ಅಜಯ್ ಸಾಹುಕಾರ ವಂದಿಸಿದರು. ದೀಪಕ್ ಕುಡಾಳ್ಕರ್ ಸೇರಿದಂತೆ ವಿವಿಧ ಸಂಘಟನೆಗಳು ಎನ್. ಮಹೇಶ್ ಅವರನ್ನು ಸನ್ಮಾನಿಸಿ ಗೌರವಿಸಿದವು.