ಕಾರವಾರ: ನಗರದ ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿರುವ ಪ್ರೀಮಿಯರ್ ಹೋಟೆಲ್ ಬಳಿ ಸಾರಿಗೆ ಬಸ್ಸೊಂದು ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ರಭಸವಾಗಿ ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಏಕಕಾಲಕ್ಕೆ ಮೂರು ಐಷಾರಾಮಿ ಕಾರುಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಕಾರವಾರದಿಂದ ಚಿತ್ತಾಕುಲಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ಮುಂದಕ್ಕೆ ನುಗ್ಗಿದ ಪರಿಣಾಮ, ಅದರ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಇನ್ನೋವಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳಿಗೂ ಸರಣಿಯಾಗಿ ಹೊಡೆತ ಬಿದ್ದಿದೆ. ಪರಿಣಾಮವಾಗಿ ಈ ಮೂರೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ.
ರಸ್ತೆ ಬದಿ ಸುರಕ್ಷಿತವಾಗಿ ನಿಲ್ಲಿಸಿದ್ದ ತಮ್ಮ ಬೆಲೆಬಾಳುವ ಕಾರುಗಳು ಬಸ್ ಡಿಕ್ಕಿಯಿಂದಾಗಿ ಹಾನಿಗೊಳಗಾಗಿದ್ದನ್ನು ಕಂಡ ಮಾಲೀಕರು ಆಕ್ರೋಶಗೊಂಡಿದ್ದು, ಸಾರಿಗೆ ಬಸ್ ಚಾಲಕನ ಅಜಾಗರೂಕತೆಯ ವಿರುದ್ಧ ಕಿಡಿಕಾರಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಲಾಟೆಯನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.ಈ ಅಪಘಾತದ ಬೆನ್ನಲ್ಲೇ ಗ್ರೀನ್ ಸ್ಟ್ರೀಟ್ ರಸ್ತೆಯ ಪಾರ್ಕಿಂಗ್ ಅವ್ಯವಸ್ಥೆಯ ಕುರಿತು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿರುವ ಹೋಟೆಲ್‌ಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಬಸ್‌ನಂತಹ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಹಿಂದೆಯೂ ಅನೇಕ ಬಾರಿ ದೂರು ನೀಡಿದರೂ ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ. ಇನ್ನು ಮುಂದಾದರೂ ಅವ್ಯವಸ್ಥಿತವಾಗಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.